Thursday March 17 2016

Follow on us:

Contact Us

ಕುರಿ ಹಿಂಡು ಕಾಯಲು ತೋಳಗಳ ಆಗಮನ!

nataraju-v11211-1211111

ನಟರಾಜು ವಿ

ಕುರಿ ಹಿಂಡು ಕಾಯಲು ತೋಳಗಳನ್ನು ನೇಮಿಸಿಕೊಳ್ಳುವ ಜಾಣತನಕ್ಕೆ ತಾಜಾ ಉದಾಹರಣೆಯೊಂದನ್ನು ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ತೋರಿದೆ. ಲೋಕಾಯುಕ್ತ ಸಂಸ್ಥೆಯನ್ನು ಹೇಗೆ ಮುದುರಿ ಮೂಲೆಗೆ ಸರಿಸಬಹುದು ಎನ್ನುವುದನ್ನು ನಿರೂಪಿಸಿರುವ ಸರ್ಕಾರ ಆ ಜಾಗಕ್ಕೆ ‘ಭ್ರಷ್ಟಾಚಾರ ನಿಗ್ರಹ ದಳ’ವೆನ್ನುವ ಹಾಸ್ಯಾಸ್ಪದ ಸಂಸ್ಥೆಯೊಂದನ್ನು ಯಾವುದೇ ಚರ್ಚೆಗಳಿಲ್ಲದೆ, ಶಾಸನಸಭೆಯ ಅನುಮೋದನೆಯಿಲ್ಲದೆ ಕೇವಲ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವೊಂದನ್ನು ಮುಂದಿಟ್ಟುಕೊಂಡು ತರುವ ಮೂಲಕ ಅಸೀಮ ನಿರ್ಲಜ್ಜತನ ಪ್ರದರ್ಶಿಸಿದೆ.

ಒಂದೆರಡು ವರ್ಷದ ಕೆಳಗೆ ಲೋಕಾಯುಕ್ತದ ವಿಚಾರ ಬಂದಾಗಲೆಲ್ಲ ಅದಕ್ಕೆ ಶಾಸನಾತ್ಮಕವಾಗಿ ಪರಮಾಧಿಕಾರ ನೀಡುವ ಮೂಲಕ ಭ್ರಷ್ಟಾಚಾರದ ವಿರುದ್ಧ ಸೆಣೆಸಲು ಶಕ್ತಿ ತುಂಬಬೇಕು ಎನ್ನುವ ವಾದ ಕೇಳಿಬರುತ್ತಿತ್ತು.

ಆರೋಪಿಗಳ ವಿರುದ್ಧ ತನಿಖೆ, ವಿಚಾರಣೆ ನಡೆಸುವ ಲೋಕಾಯುಕ್ತ ಸಂಸ್ಥೆಗೆ ಅವರು ತಪ್ಪಿತಸ್ಥರೆಂದು ಕಂಡುಬಂದರೆ ಕ್ರಮಕೈಗೊಳ್ಳುವ ಅಧಿಕಾರವಿಲ್ಲ, ಬದಲಿಗೆ ಭ್ರಷ್ಟ ಅಧಿಕಾರಿಯ ವಿರುದ್ಧ ಸರ್ಕಾರಕ್ಕೆ ಶಿಫಾರಸ್ಸು ಮಾಡಲಷ್ಟೇ ಅದು ಶಕ್ಯ. ಹಾಗಾಗಿ ಈ ಸಂಸ್ಥೆಗೆ ಹಲ್ಲು, ಉಗುರುಗಳನ್ನು ನೀಡಿ ಭ್ರಷ್ಟರನ್ನು ಶಿಕ್ಷಿಸುವಂತೆ ಪುನರ್ ರೂಪಿಸಬೇಕು ಎನ್ನುವ ಕಾಳಜಿ ವ್ಯಕ್ತವಾಗುತ್ತಿತ್ತು.

ಭ್ರಷ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಆಶಾಭಾವನೆಯನ್ನು ಲೋಕಾಯುಕ್ತ ಹುಟ್ಟಿಹಾಕಿದ್ದುದರಿಂದ ಇಂಥ ಚರ್ಚೆಗಳು ಕೇಳಿಬರುತ್ತಿದ್ದವು. ವಿಪರ್ಯಾಸವೆಂದರೆ ಈ ಎರಡು ವರ್ಷಗಳ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯ ಘನತೆಯನ್ನು ಒಳಗಿನವರೇ ಹಾಳುಮಾಡಿದರು, ಲೋಕಾಯುಕ್ತದಂಥ ಉನ್ನತ ಹುದ್ದೆಯಲ್ಲಿ ಕುಳಿತವರೇ ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಎದುರಿಸಿದರು. ಲೋಕಾಯುಕ್ತದಂಥ ಸಂಸ್ಥೆ ಇಂಥ ಅಧೋಗತಿಯತ್ತ ಹೊರಳಿದಾಗ ಖುಷಿಪಟ್ಟವರೆಂದರೆ ಎಲ್ಲ ಪಕ್ಷಗಳಲ್ಲಿರುವ ಭ್ರಷ್ಟರು ಹಾಗೂ ಭ್ರಷ್ಟತೆಯನ್ನೇ ಧರ್ಮವನ್ನಾಗಿಸಿಕೊಂಡಿರುವ ಅಧಿಕಾರಿಗಳು.

ಇದೀಗ ಭ್ರಷ್ಟಾಚಾರ ನಿಗ್ರಹದಳವೆನ್ನುವ (ಎಸಿಬಿ) ‘ಮಾತನಾಡುವ ಗಿಳಿ’ಯೊಂದನ್ನು ರಚಿಸಲು ಹೊರಟಿರುವ ಸರ್ಕಾರ ಭ್ರಷ್ಟರು ಇನ್ನಷ್ಟು ನಿರಾಳರಾಗುವಂತೆ ಮಾಡಿದೆ. ಇನ್ನು ಅಧಿಕಾರದಲ್ಲಿರುವ ಯಾವುದೇ ಪಕ್ಷವೂ ತನ್ನ ಹಿತಾಸಕ್ತಿಗೆ ಪೂರಕವಾಗಿ ‘ಗಿಳಿಪಾಠ’ ಒಪ್ಪಿಸಲು ಎಸಿಬಿಗೆ ಹೇಳಬಹುದು. ತನ್ನ ಮೇಲೆ ಆಪಾದನೆಗಳು ಬಂದಾಗ ಇದೇ ಎಸಿಬಿಗೆ ತನಿಖೆಗೆಂದು ವರ್ಗಾಯಿಸಿ ತನಗೆ ಬೇಕಾದಂತೆ ವರದಿ ಬರೆಸಿಕೊಳ್ಳಬಹುದು.

ಕೇಂದ್ರ ಸರ್ಕಾರದ ಅಡಿ ಬರುವ ಸಿಬಿಐ ಬಗ್ಗೆ ಏನೆಲ್ಲ ಆಪಾದನೆಗಳು ಕೇಳಿಬರುತ್ತವೆಯೋ ಅದೆಲ್ಲ ಆಪಾದನೆಗಳು ಇನ್ನು ಮುಂದೆ ರಾಜ್ಯದಲ್ಲಿ ಎಸಿಬಿಯ ಬಗ್ಗೆ ಕೇಳಿಬರುವುದರಲ್ಲಿ ಸಂದೇಹವಿಲ್ಲ. ಸಿಬಿಐ ಅನ್ನು ಸರ್ವೋಚ್ಚ ನ್ಯಾಯಾಲಯವೇ ‘ಪಂಜರದ ಗಿಳಿ’ ಎಂದು ವ್ಯಾಖ್ಯಾನಿಸಿತ್ತು. ಅಂಥದ್ದೇ ‘ರಂಜಿಸುವ ಪಂಜರದ ಗಿಳಿಯೊಂದನ್ನು’ ಈಗ ರಾಜ್ಯ ಸರ್ಕಾರವೂ ಹುಟ್ಟಿಹಾಕಿದೆ. ಇನ್ನೂ ಮಹತ್ವದ ಅಂಶವೆಂದರೆ ಅಧಿಕಾರಶಾಹಿಯ ಮೇಲೆ ಸವಾರಿ ಮಾಡಲು ಸರ್ಕಾರವು ಇದೇ ಸಂಸ್ಥೆಯನ್ನು ಸಮರ್ಥವಾಗಿ ಬಳಸುವ ಸಾಧ್ಯತೆ ಇರುವುದು.

ರಾಜಕಾರಣಿಗಳು ತಮಗೆ ಬೇಕಾದ ಅಧಿಕಾರಿಗಳನ್ನು ರಕ್ಷಿಸಿಕೊಳ್ಳುವಂತೆಯೇ ಬೇಡವಾದ ಅಧಿಕಾರಿಗಳ ವಿರುದ್ಧ ಎಸಿಬಿಯ ಮೂಲಕ ಸಮರವನ್ನೂ ಸಾರಬಹುದು. ಎಸಿಬಿ ಎನ್ನುವ ಅಂಕುಶವನ್ನು ನಮ್ಮ ಜನಪ್ರತಿನಿಧಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಅವರ ನೈತಿಕ ಮಟ್ಟವನ್ನು ಅವಲಂಬಿಸಿರುತ್ತದೆ. ಆ ನೈತಿಕ ಮಟ್ಟ ಯಾವ ಹಂತಕ್ಕೆ ತಲುಪಿದೆ ಅಥವಾ ಕುಸಿದಿದೆ ಎನ್ನುವ ಅರಿವುಳ್ಳವರಿಗೆ ಎಸಿಬಿ ಯಾವ ರೀತಿ ಬಳಕೆಯಾಗಬಹುದು ಎನ್ನುವ ಬಗ್ಗೆ ವಿವರಿಸುವ ಅಗತ್ಯವಿಲ್ಲ.

ಎಸಿಬಿಯ ವಿರುದ್ಧ ಯಾವುದೇ ರಾಜಕೀಯ ಪಕ್ಷಗಳು ಬಹಿರಂಗವಾಗಿ ಏನನ್ನೇ ಹೇಳುತ್ತಿದ್ದರೂ ಆಂತರ್ಯದಲ್ಲಿ ಅವುಗಳಿಗೆ ಕಾಂಗ್ರೆಸ್ ಸರ್ಕಾರದ ನಡೆ ಖುಷಿಯನ್ನೇ ತಂದಿದೆ. ರಾಜ್ಯದಲ್ಲಿನ ಸಾಂವಿಧಾನಿಕ ಉನ್ನತ ಹುದ್ದೆಗಳನ್ನು ಆಲಂಕರಿಸಿರುವವರು, ಈ ಹಿಂದೆ ಇದೇ ಸ್ಥಾನಗಳಲ್ಲಿ ಕುಳಿತಿದ್ದವರು, ಹೀಗೆ ಎಲ್ಲರೂ ಇನ್ನು ಮುಂದೆ ಒಬ್ಬರು ಮತ್ತೊಬ್ಬರ ಭ್ರಷ್ಟಾಚಾರದ ಬಗ್ಗೆ ಕುರುಡಾಗುತ್ತಾರೆ. ಅಧಿಕಾರವೆನ್ನುವುದು ಶಾಶ್ವತವಲ್ಲ ಎಂದು ಬಲ್ಲ ರಾಜಕಾರಣಿಗಳು ತಮ್ಮ ಎದುರು ಪಾಳಯದವರ ಭ್ರಷ್ಟತೆಯ ಬಗ್ಗೆ ಸದಾ ಮಂದಗಣ್ಣು ಹೊಂದಿರುತ್ತಾರೆ.

ಈ ಮಂದಗಣ್ಣು ಪೂರ್ಣ ಅಂಧತ್ವವಾಗುವಂತೆ ಎಸಿಬಿ ಪ್ರೇರೇಪಿಸುವ ಸಾಧ್ಯತೆ ಇದೆ. ಯಾವುದೇ ಪಕ್ಷದ ಮುಖ್ಯಮಂತ್ರಿಯೂ ಸೇರಿದಂತೆ ಸಚಿವ ಸಂಪುಟದಲ್ಲಿರುವವರ ವಿರುದ್ಧ ಕೇಳಿಬರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆಗೆ ಒತ್ತಾಯಿಸುವಂತೆ ವಿಪಕ್ಷಗಳು ದೊಡ್ಡಗಂಟಲಿನಲ್ಲಿ ಕೇಳಬಹುದಾದರೂ ಹಾಗೆ ಮಾಡುವುದು ತಮಗೆ ಸಾಧುವಲ್ಲ ಎನ್ನುವ ಪರೋಕ್ಷ ಭಯ ಅವರನ್ನು ಕಾಡುವುದು ಸುಳ್ಳಲ್ಲ. ಹಿಂದೆ ತಾವುಗಳು ಅಧಿಕಾರದಲ್ಲಿದ್ದಾಗ ಮಾಡಿರಬಹುದಾದ ಭ್ರಷ್ಟಾಚಾರಗಳು ಎಲ್ಲಿ ಮತ್ತೆ ಎಸಿಬಿ ಕೈಯಲ್ಲಿ ಜೀವತಳೆಯುತ್ತವೋ ಎಂದು ಉಸಿರು ಬಿಗಿಹಿಡಿಯಬೇಕಾಗುತ್ತದೆ. ಥೇಟ್ ಸಿಬಿಐ ಹಾಗೂ ಇತರ ತನಿಖಾ ಸಂಸ್ಥೆಗಳ ಕೈಯಲ್ಲಿ ಜೀವಪಡೆಯುವ ರಾಜಕೀಯ ಪ್ರಕರಣಗಳಂತೆ!

ಆಡಳಿತಾರೂಢ ಸರ್ಕಾರ ಲೋಕಾಯುಕ್ತವನ್ನು ಈ ಸ್ಥಿತಿಗೆ ತಂದಿರುವುದಕ್ಕೆ ಏನು ಬೇಕಾದರೂ ಸಮಜಾಯಿಷಿ ನೀಡಬಹುದು. ಆದರೆ ಸರ್ಕಾರದ ಈ ನಡೆಯನ್ನು ಸಾಧನೆ ಎಂದು ಯಾರೂ ಪರಿಗಣಿಸುವುದಿಲ್ಲ. ಬದಲಿಗೆ ಸರ್ಕಾರದ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಏಳುವಂತೆ ಮಾಡುತ್ತದೆ. ಕೇವಲ ಕೆಲ ದಿನದ ಹಿಂದಷ್ಟೇ ವಿಧಾನಸಭಾ ಅಧಿವೇಶನವನ್ನು ಮುಗಿಸಿರುವ ಇನ್ನೇನು ಬಜೆಟ್ ಅಧಿವೇಶನದ ಹೊಸ್ತಿಲಿನಲ್ಲಿರುವ ಸಂದರ್ಭದಲ್ಲಿ ಯಾವುದೇ ಸರ್ಕಾರವು ಏಕೆ ಇಂಥ ನಿರ್ಧಾರವನ್ನು ಸರ್ಕಾರಿ ಆದೇಶದ ಮೂಲಕ ಕೈಗೊಳ್ಳಬೇಕು? ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿಯೇ ಚರ್ಚೆ, ವಿಧೇಯಕಗಳ ಮೂಲಕ ಎಸಿಬಿಗೆ ಜನ್ಮ ನೀಡಬಹುದಿತ್ತಲವೇ? ಕನಿಷ್ಠ ಪಕ್ಷ ಆಗ ಕೆಲವಾದರೂ ಮೌಲಿಕ ರಾಜಕಾರಣಿಗಳು ತಮ್ಮ ವಿರೋಧವನ್ನು ಇಂಥ ನಡೆಯ ಬಗ್ಗೆ ದಾಖಲಿಸುವ ಅವಕಾಶವಾದರೂ ಸಿಗುತ್ತಿತ್ತು.

ಅದರಿಂದ ಏನು ಉಪಯೋಗವಾಗುತ್ತಿತ್ತೋ ಬಿಡುತ್ತಿತ್ತೋ, ಆದರೆ ಜನರ ಮನಸ್ಸಿನಲ್ಲಿರುವ ಅಭಿಪ್ರಾಯಗಳು ಜನಪ್ರತಿನಿಧಿಗಳ ಸಭೆಯಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಾದರೂ ಇರುತ್ತಿತ್ತು. ಆದರೆ ಇದೆಲ್ಲವನ್ನೂ ಸಿನಿಕತನದಿಂದ ನಿವಾರಿಸಿಕೊಂಡಿರುವ ರಾಜ್ಯ ಸರ್ಕಾರ ಪ್ರಜಾಪ್ರಭುತ್ವವೆನ್ನುವುದನ್ನು ಹೇಗೆ ಆಟಿಕೆಯಾಗಿ ಬಳಸಿಕೊಳ್ಳಬಹುದು ಎನ್ನುವುದನ್ನು ತೋರಿಸಿದೆ.

ಭ್ರಷ್ಟ ಅಧಿಕಾರಿಗಳ ಬಗ್ಗೆ ವಿಚಾರಣೆ ನಡೆಸುವುದಕ್ಕೂ ಮುನ್ನವೇ ಇನ್ನುಮುಂದೆ ಸರ್ಕಾರದ ಪೂರ್ವಾನುಮತಿಯನ್ನು ಪಡೆಯಬೇಕು ಎನ್ನುವ ಅಂಶವನ್ನು ಎಸಿಬಿ ನಿಯಮಾವಳಿಗಳಲ್ಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತತೆ ಮೂಡುವುದು ಒಮ್ಮೆ ಸರ್ಕಾರ ಎಸಿಬಿಯ ಕಾರ್ಯನಿರ್ವಹಣೆಯ ಕುರಿತಾದ ವಿಸ್ತೃತ ನಿಯಮಾವಳಿ ಕೈಪಿಡಿಯನ್ನು ರೂಪಿಸಿದ ನಂತರವೇ.

ಉಳಿದಂತೆ ಎಸಿಬಿಯು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕೈಕೆಳಗೆ ಬರಲಿದ್ದು, ಇಡೀ ಇಲಾಖೆಯ ಹೊಣೆ ಮುಖ್ಯಮಂತ್ರಿಯವರ ಕೈಯಲ್ಲಿರುವುದರಿಂದ ಅವರ ಕೈಕೆಳಗೆ ಎಸಿಬಿ ಇರಲಿದೆ ಎನ್ನುವ ಅಂಶವಂತೂ ಸ್ಪಷ್ಟವಾಗಿದೆ. ಇದರ ಅರ್ಥ ತಮ್ಮ ಹಾಗೂ ತಮ್ಮ ಸಂಪುಟ ಸಹೋದ್ಯೋಗಿಗಳ ಮೇಲೆ ಬರುವ ಭ್ರಷ್ಟಾಚಾರ ಆರೋಪಗಳನ್ನು ಮುಖ್ಯಮಂತ್ರಿಯವರ ನೇರ ನಿಗಾವಣೆಯಲ್ಲಿರುವ ತನಿಖಾ ಸಂಸ್ಥೆಯೇ ನಡೆಸಲಿದೆ ಎನ್ನುವುದು.

ಸ್ವಾಯತ್ತ ಸಂಸ್ಥೆಯೊಂದು ತನಿಖೆಯ ನಡೆಸುವುದಕ್ಕೂ, ಹುಟ್ಟುತ್ತಲೇ ಲಗಾಮು ಹಾಕಿಸಿಕೊಂಡಿರುವ ಸಂಸ್ಥೆಯೊಂದು ತನಿಖೆ ನಡೆಸುವುದಕ್ಕೂ ವ್ಯತ್ಯಾಸವಿಲ್ಲವೇ?

ಪ್ರಸ್ತುತ ರಾಜ್ಯ ಸರ್ಕಾರದ ಆಡಳಿತದಲ್ಲಿ ಒಂದು ಅಂಶವಂತೂ ಪ್ರಧಾನವಾಗಿ ಕಾಣುತ್ತಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸದಾಕಾಲ ಒಂದಿಲ್ಲದೊಂದು ಎಡವಟ್ಟುಗಳ ಮೂಲಕ ಸಾರ್ವಜನಿಕ ಚರ್ಚೆಯಲ್ಲಿರುತ್ತದೆ; ಸೈದ್ಧಾಂತಿಕ ಸಂಘರ್ಷಗಳು, ಅಭಿಪ್ರಾಯಭೇದಗಳು ತಾರಕಕ್ಕೇರಿರುವ ಇಂಥ ಸನ್ನಿವೇಶದಲ್ಲಿ ತಮ್ಮಂಥ ರಾಜ್ಯ ಸರ್ಕಾರಗಳ ನಡೆಗಳ ಮೇಲೆ ಯಾರೂ ಅಷ್ಟಾಗಿ ಗಮನ ಹರಿಸುವುದಿಲ್ಲ, ಹೇಳಿಕೊಳ್ಳುವಂಥ ಸಾರ್ವಜನಿಕ ಚರ್ಚೆಗಳೂ ನಡೆಯುವುದಿಲ್ಲ ಎನ್ನುವಂಥ ಅಭಿಪ್ರಾಯ ಅದರಲ್ಲಿರುವಂತಿದೆ.

ಒಮ್ಮೆ ಬಜೆಟ್ ಮಂಡನೆಯಾದ ನಂತರ ಮಾಧ್ಯಮಗಳ ಚಿತ್ತ ಬಜೆಟ್ ಕಡೆಗೆ ಹರಿಯುತ್ತದೆ. ಆನಂತರ ಎಸಿಬಿ ಕುರಿತಾದ ಚರ್ಚೆ ಸಾರ್ವಜನಿಕ ವಲಯದಿಂದ ಮರೆಯಾಗುತ್ತದೆ ಎನ್ನುವ ಅನಿಸಿಕೆಯೂ ಅಧಿಕಾರ ಕೇಂದ್ರದಲ್ಲಿರಬಹುದು. ಆದರೆ ಲೋಕಾಯುಕ್ತವನ್ನು ನಿರ್ಜೀವಗೊಳಿಸುವ ನಡೆಗಳ ವಿರುದ್ಧ ಮುಂದಿನ ದಿನಗಳಲ್ಲಿ ನಡೆಯುವ ಕಾನೂನಾತ್ಮಕ ಹಾಗೂ ಸಾರ್ವಜನಿಕ ಹೋರಾಟಗಳು ಸರ್ಕಾರಕ್ಕೆ ದುಬಾರಿಯಾಗುವ ಸೂಚನೆ ದಟ್ಟವಾಗಿದೆ. ವೈಯಕ್ತಿಕವಾಗಿ ಇದಾಗಲೇ ಮಂಕಾಗಿರುವ ಮುಖ್ಯಮಂತ್ರಿಯವರ ವರ್ಚಸ್ಸು ಇನ್ನಷ್ಟು ಕಳಾಹೀನವಾಗಲು, ಅವರ ವಿಶ್ವಾಸಾರ್ಹತೆಯ ಪ್ರಶ್ನೆ ಮತ್ತಷ್ಟು ಮುಂಚೂಣಿಗೆ ಬರಲು ಈಗಿನ ಘಟನಾವಳಿಗಳು ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

nkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬದಲಾಗಬೇಕಾದ್ದು ಬಾಹ್ಯವಲ್ಲ, ಅಂತರಂಗ…

ಮುಂದಿನ ಸುದ್ದಿ »

ಬೆಳೆದ ಮಕ್ಕಳ ಸುತ್ತ ಅನುಮಾನದ ಹುತ್ತ…

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×