Thursday March 3 2016

Follow on us:

Contact Us

ಅರಣ್ಯನ್ಯಾಯ ಹಾಗೂ ಅಸ್ವಸ್ಥ ರಾಜಕಾರಣ

nataraju-v11211-121111

-ನಟರಾಜು ವಿ

ಇಶ್ರತ್ ಜಹಾನ್ ಪ್ರಕರಣ ಈಗ ಮತ್ತೆ ಸುದ್ದಿಯಲ್ಲಿದೆ. ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಮೇಲೆ ಇದೀಗ ನ್ಯಾಯಾಲಯದ ತನಿಖೆಯನ್ನು ದಿಕ್ಕುತಪ್ಪಿಸಿದ ಗುರುತರ ಆಪಾದನೆಗಳನ್ನು ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೊದಲ ಅಫಿಡವಿಟ್ ಅನ್ನು ಬದಲಿಸಿ ಮರು ಅಫಿಡವಿಟ್ ಸಲ್ಲಿಸುವ ಮೂಲಕ ಚಿದಂಬರಂ ಪ್ರರಕಣವನ್ನು ರಾಜಕೀಯಗೊಳಿಸಿದರು ಎನ್ನುವ ಗಂಭೀರ ಆರೋಪವಿದೆ. ಕಾಂಗ್ರೆಸ್ ಪಕ್ಷವಂತೂ ಚಿದಂಬರಂ ಅವರ ಬೆನ್ನಿಗೆ ಬಲವಾಗಿ ನಿಂತಿದೆ. ತಮ್ಮ ಮಗ ಕಾರ್ತಿ ಚಿದಂಬರಂ ವಿರುದ್ಧ ಕೇಳಿಬರುತ್ತಿರುವ ಹಗರಣಗಳು, ತಮ್ಮ ಮೇಲೆ ಮಾಡಲಾಗುತ್ತಿರುವ ಹಗರಣಗಳು ಇದಾವುದರಿಂದಲೂ ಚಿದಂಬರಂ ವಿಚಲಿತರಾದಂತೆ ತೋರುತ್ತಿಲ್ಲ. ಬದಲಿಗೆ ಅವರು ಮುಂದೊಂದು ದಿನ ಇವೆಲ್ಲ ತಮ್ಮ ರಾಜಕೀಯ ಜೀವನದಲ್ಲಿ ಎದುರಾಗಬಹುದಾದ ಆಪಾದನೆಗಳು ಎಂದೇ ಸಿದ್ಧಗೊಂಡಿದ್ದರೇನೋ ಎನ್ನುವಂತೆ ಉತ್ತರಿಸುತ್ತಿದ್ದಾರೆ!

ಚಿದಂಬರಂ ಅವರಿಗೂ ಹಾಗೂ ಕಾಂಗ್ರೆಸ್ ಪಕ್ಷದ ಗರ್ಭಗುಡಿಯಲ್ಲಿ ಸದಾ ಠಳಾಯಿಸುವ ಇತರ ನಾಯಕರಿಗೂ ಹಲವಾರು ವ್ಯತ್ಯಾಸಗಳಿವೆ. ಕಾಂಗ್ರೆಸ್ ಪಕ್ಷದ ಧುರೀಣರು, ಹೈಕಮಾಂಡ್ ನಿಕಟವರ್ತಿಗಳೆಲ್ಲ ಗಾಂಧಿ ಕುಟುಂಬದ ಮೇಲೆ ಆಪಾದನೆ ಬಂದಾಗ, ಅವರನ್ನು ಪ್ರತಿಪಕ್ಷಗಳು ಟೀಕಿಸಲು ಮುಂದಾದಾಗ ಕೆರಳಿ, ನಕಲಿ ಕೆಂಡವಾಗುತ್ತಾರೆ. ಕೆಲವೊಮ್ಮೆ ತಾವೇ ತತ್ತರಿಸಿ, ಗಲಿಬಿಲಿಗೊಂಡು ಪರದಾಡುವುದೂ ಉಂಟು. ಗಾಂಧಿ ಪರಿವಾರವನ್ನು ಮುಟ್ಟಿದಾಕ್ಷಣ ಈ ಮಂದಿ ವರ್ತಿಸುವ ರೀತಿಗೂ, ನಾಗಪುರದ ಆರ್ ಎಸ್ ಎಸ್ ನ ಗರ್ಭಗುಡಿಯಲ್ಲಿ ಕೂತಿರುವವರ ವಿರುದ್ಧ ವಿರೋಧ ಪಕ್ಷಗಳು ಟೀಕಾಸ್ತ್ರ ಪ್ರಯೋಗಿಸ ತೊಡಗಿದಾಗ ಬಿಜೆಪಿ ತೋರಿಸುವ ವರ್ತನೆಗೂ ಹೆಚ್ಚು ವ್ಯತ್ಯಾಸವಿರುವುದಿಲ್ಲ.

ಚಿಂದಂಬರಂ ತಮ್ಮ ಸ್ವಪಕ್ಷೀಯರಿಗಿಂತ ಈ ವಿಚಾರದಲ್ಲಿ ಸಾಕಷ್ಟು ಭಿನ್ನ. ಅವರು ಕಾಂಗ್ರೆಸ್ ವರಿಷ್ಠರೆಡೆಗೆ ಬರುವ ಅಪಾದನೆಗಳನ್ನೇ ಆಗಲಿ, ತಮ್ಮ ವಿರುದ್ಧ ವೈಯಕ್ತಿಕವಾಗಿ ಮಾಡಲಾಗುವ ಆರೋಪಗಳನ್ನೇ ಆಗಲಿ ತಣ್ಣಗೆ, ವಿಶ್ಲೇಷಣಾತ್ಮಕವಾಗಿ ಎದುರಿಸಿ ಹಿಮ್ಮೆಟ್ಟಿಸುವತ್ತ ಗಮನಹರಿಸುತ್ತಾರೆ. ತಮ್ಮ ಸಾರ್ವಜನಿಕ ಜೀವನದಲ್ಲಿ ಚಿದಂಬರಂ ಹೆಚ್ಚಾಗಿ ನಂಬಿಕೊಂಡಿರುವುದು ತರ್ಕ ಹಾಗೂ ವಿಶ್ಲೇಷಣೆಗಳನ್ನು. ಬಯಸಿದಾಗಲೆಲ್ಲ ಮಾಧ್ಯಮಗಳ ಕೈಗೆ ಸಿಗದ, ಆದರೆ ಬೇಕೆಂದಾಗ ತನ್ನ ಹಾಗೂ ಪಕ್ಷದ ಅಗತ್ಯಕ್ಕೆ ತಕ್ಕಂತೆ ಮಾಧ್ಯಮಗಳನ್ನು ದುಡಿಸಿಕೊಳ್ಳಬಲ್ಲ, ಯಾವ ವಿಚಾರವನ್ನು ಯಾವ ಸಂದರ್ಭದಲ್ಲಿ ಮಂಡಿಸಿದರೆ ಅದಕ್ಕೆ ರಾಜಕೀಯ ಮನ್ನಣೆ ದಕ್ಕಿಸಿಕೊಳ್ಳಬಹುದು ಎನ್ನುವ ಖಚಿತ ಲೆಕ್ಕಾಚಾರಗಳನ್ನು ಅರಿತು ಹೆಜ್ಜೆಗಳನ್ನು ಇರಿಸುವ ‘ಚತುರಂಗ’ ರಾಜಕಾರಣಿ ಚಿದಂಬರಂ.

ಸ್ಥಿತಪ್ರಜ್ಞೆ, ತರ್ಕಗಳನ್ನು ನೆಚ್ಚಿಕೊಂಡು ರಾಜಕಾರಣ ನಡೆಸುವ ಇಂದಿನ ದಿನಮಾನದ ಕೆಲವೇ ರಾಜಕಾರಣಿಗಳಲ್ಲಿ ಚಿದಂಬರಂ ಒಬ್ಬರು. ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ, ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇದೇ ಮಾದರಿಯಡಿ ತಟ್ಟನೆ ನೆನಪಿಗೆ ಬರುವ ಇನ್ನೆರಡು ಹೆಸರುಗಳು. ಗಂಭೀರ ಅಧ್ಯಯನ, ಅಪಾರವಾದ ವಿತ್ತೀಯ ಹಾಗೂ ಕಾನೂನಾತ್ಮಕ ಜ್ಞಾನ ಚಿದಂಬರಂ ಅವರನ್ನು ಉಳಿದಿಬ್ಬರಿಗಿಂತ ಬಲು ಮುಂದೆ ಇರಿಸಿದೆ. (ಬಿಜೆಡಿ ಪಕ್ಷ ಚಿದಂಬರಂ ವಿರುದ್ಧ ಲೋಕಸಭೆಯಲ್ಲಿ ಗಟ್ಟಿಯಾಗಿ ದನಿ ಎತ್ತಿದೆ. ಎಐಎಡಿಎಂಕೆ ಹಾಗೂ ಟಿಎಂಸಿ ಜೊತೆಗೆ ಬಿಜೆಡಿ ಕೈಜೋಡಿಸಿ ಕಾಂಗ್ರೇಸೇತರ ಪ್ರಾಂತೀಯ ಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿದೆ.)

ಆದರೆ, ಇಂಥ ಚಿದಂಬರಂ ಈಗ ಎದುರಿಸುತ್ತಿರುವುದು ರಾಜಕಾರಣಕ್ಕೆ ಅಂಟಿಕೊಂಡಿರುವ, ಸಮಯ ನೋಡಿಕೊಂಡು ಎದುರಾಳಿಯನ್ನು ಶತಾಯಗತಾಯ ಹಣಿಯಲು ಎಂಥ ತಂತ್ರವನ್ನೂ ರೂಪಿಸಬಲ್ಲ ‘ಸಂಚಿನ ರಾಜಕಾರಣ’ದ ಆಪಾದನೆಯನ್ನು. ಗೋದ್ರೋತ್ತರ ಗಲಭೆಗಳ ಹಿನ್ನೆಲೆಯಲ್ಲಿ ಗುಜರಾತ್ ನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಆಡಳಿತದ ವಿರುದ್ಧ ದೊಡ್ಡಮಟ್ಟದ ಅಸಮಾಧಾನ ದೇಶದೆಲ್ಲೆಡೆ ವ್ಯಕ್ತವಾಯಿತು. ಮೋದಿಯವರು ಪ್ರಧಾನಿಯಾದರೂ ಜನಮಾನಸದಿಂದ ಗುಜರಾತ್ ಗಲಭೆಗಳ ವಿಚಾರವೇನೂ ಸಂಪೂರ್ಣ ಮರೆಯಾಗಿಲ್ಲ.

ಜಾಗತಿಕ ವಲಯದಲ್ಲಿಯೂ ಈ ಕೋಮುದಳ್ಳುರಿಯನ್ನು ತಡೆಯಲು ಅಶಕ್ತವಾದ ಮೋದಿ ಸರ್ಕಾರದ ಬಗ್ಗೆ ಕಟುಮಾತುಗಳು ಕೇಳಿಬಂದವು. ಸರ್ಕಾರವೊಂದು ನಿಂತು ನಡೆಸಿದ ಅಲ್ಪಸಂಖ್ಯಾತರ ಮಾರಣಹೋಮ ಎನ್ನುವ ಗಂಭೀರ ಆಪಾದನೆಗಳನ್ನು ಇಂದಿಗೂ ಸಂಪೂರ್ಣವಾಗಿ ಅಳಿಸಿ ಹಾಕುವುದಕ್ಕೆ ಮೋದಿಯವರಿಗೆ ಸಾಧ್ಯವಾಗಿಲ್ಲ. ಹೇಗೆ ಬಾಬ್ರಿ ಮಸೀದಿ ಧ್ವಂಸದ ನಂತರ ದೇಶದುದ್ದಗಲಕ್ಕೂ ನಡೆದ ಕೋಮುಗಲಭೆಗಳು ದೇಶವನ್ನು ಮಾನಸಿಕವಾಗಿ ವಿಭಜಿಸಿದವೋ, ಅದೇ ರೀತಿ ಗೋದ್ರ ಘಟನೆ ನಂತರ ಗುಜರಾತ್ ನಲ್ಲಿ ನಡೆದ ಗಲಭೆಗಳೂ ಕೂಡ ಭಾರತದ ಸಮಾಜದಲ್ಲಿನ ಧಾರ್ಮಿಕ ಸಾಮರಸ್ಯದ ಎಳೆಗಳನ್ನು ಇನ್ನಿಲ್ಲದಂತೆ ತುಂಡರಿಸಿ ಎರಡು ಸಮಾಜಗಳ ನಡುವೆ ಗಂಭೀರವಾದ ವಿಶ್ವಾಸದ ಕೊರತೆ ಉಂಟು ಮಾಡಿದವು. ಬಾಬ್ರಿ ಮಸೀದಿ ಧ್ವಂಸದ ನಂತರದ ಘಟನೆಗಳು 93ರ ಮುಂಬೈ ಬಾಂಬ್ ಸ್ಪೋಟಗಳ ಮೂಲಕ ಪ್ರತಿಕ್ರಿಯೆಗಳನ್ನು ಪಡೆದರೆ, ಗುಜರಾತ್ ಗಲಭೆಗಳಿಗೆ ಅಂಥ ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆಗಳು ವ್ಯಕ್ತವಾಗಲಿಲ್ಲ.

ಪಾರ್ಲಿಮೆಂಟ್ ಮೇಲಿನ ದಾಳಿ, ಮುಂಬೈ ಮೇಲೆ ಪಾಕ್ ಉಗ್ರರು ನಡೆಸಿದ ದಾಳಿ, ಪಠಾಣ್ ಕೋಟ್ ಸೈನಿಕ ನೆಲೆಯ ಮೇಲಿನ ದಾಳಿ ಇಲ್ಲೆಲ್ಲ ಭಾರತ ಹಾಗೂ ಪಾಕಿಸ್ತಾನದ ನಡುವೆ ಉಂಟಾಗಿರುವ ವಿಶ್ವಾಸಾರ್ಹತೆಯ ಕೊರತೆ, ಭಯೋತ್ಪಾದಕ ಚಟುವಟಿಕೆಗಳ ಮೂಲಕ ಭಾರತೀಯ ಆಡಳಿತ ಹಾಗೂ ಸಮಾಜವನ್ನು ಸದಾಕಾಲ ಕ್ಷೋಭೆಯಲ್ಲಿರಿಸಬೇಕು ಎನ್ನುವ ಗಡಿಯಾಚೆಗಿನ ಉಗ್ರರ ಹಂಬಲ ಹೆಚ್ಚು ಕೆಲಸ ಮಾಡಿದೆ. ಹಾಗಿದ್ದರೂ ಭಾರತದಲ್ಲಿ ಕೋಮುಗಲಭೆಗಳ ವೇಳೆ ಮುಸಲ್ಮಾನರ ಮೇಲೆ ನಡೆದಿರುವ ದೌರ್ಜನ್ಯಗಳನ್ನು ಭಯೋತ್ಪಾದಕರ ಮೆದುಳಿನಲ್ಲಿ ಮತೀಯ ದ್ವೇಷದ ಅಫೀಮನ್ನು ತುಂಬಲು ಬಳಸಿಕೊಳ್ಳಲಾಗಿರುವುದನ್ನು ಸಂಪೂರ್ಣವಾಗಿ ಅಲ್ಲಗೆಳೆಯಲಾಗದು. ಹೀಗೆ ಮತೀಯ ದ್ವೇಷ ತುಂಬುವ ಸಂದರ್ಭದಲ್ಲೆಲ್ಲಾ ಗುಜರಾತ್ ಗಲಭೆಗಳನ್ನು ಪ್ರಚೋದಕವಾಗಿ ಬಳಸಿಕೊಳ್ಳಲಾಗಿದೆ. ಗುಜರಾತ್ ಕೋಮುಗಲಭೆಗಳಿಗೆ ಕಾರಣವಾದ ಶಕ್ತಿಗಳ ವಿರುದ್ಧ ಇಂದಿಗೂ ಕಾನೂನಿನ ಕುಣಿಕೆ ಬಿಗಿಯಾಗಿಲ್ಲ ಎನ್ನುವ ಭಾವನೆ ಸಾರ್ವತ್ರಿಕವಾಗಿ ಉಳಿದಿರುವುದು ಇದಕ್ಕೆ ಕಾರಣ ಎಂದು ಊಹಿಸಲು ಕಷ್ಟವೇನೂ ಆಗದು.

ನರೇಂದ್ರ ಮೋದಿಯವರ ಹತ್ಯೆಯ ಸಂಚನ್ನು ರೂಪಿಸಿದ ಲಷ್ಕರ್ ತಂಡದಲ್ಲಿ ಆತ್ಮಾಹುತಿ ದಳದ ಸದಸ್ಯೆಯಾಗಿ ಇಶ್ರತ್ ಜಹಾನ್ ಪಾಲ್ಗೊಂಡಿದ್ದಳು ಎನ್ನುವ ಗಟ್ಟಿ ಅಭಿಪ್ರಾಯವನ್ನು ಕಾಲದಿಂದ ಕಾಲಕ್ಕೆ ಮಂಡಿಸಲಾಗಿದೆ. ಅಮೆರಿಕದಲ್ಲಿ ಸದ್ಯ ಬಂಧಿಯಾಗಿರುವ, ಮುಂಬೈ ದಾಳಿ ಸಂಬಂಧದ ವಿಚಾರಣೆಯಲ್ಲಿ ಅಮೆರಿಕದಿಂದಲೇ ಸಹಕರಿಸುತ್ತಿರುವ ಉಗ್ರ ಡೇವಿಡ್ ಹೆಡ್ಲಿ ಕೂಡ ಇಶ್ರತ್ ಜಹಾನ್ ಆತ್ಮಾಹುತಿ ತಂಡದ ಸದಸ್ಯೆಯಾಗಿದ್ದಳು ಎಂದೇ ಖಚಿತಪಡಿಸಿದ್ದಾನೆ. ಐಬಿ ಹಾಗೂ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಸಹ ತಮ್ಮ ಬಳಿ ಲಭ್ಯವಿದ್ದ ಮಾಹಿತಿಗಳು ಇದನ್ನೇ ಪುಷ್ಟಿಕರಿಸಿದ್ದವು ಎನ್ನುತ್ತಿದ್ದಾರೆ.

ಇಶ್ರತ್ ಜಹಾನ್ ಹಾಗೂ ತಂಡದ ವಿರುದ್ಧ ಎನ್ ಕೌಂಟರ್ ವಿಚಾರವಾಗಿ ನಡೆದ ತನಿಖೆಯ ಸಂದರ್ಭದಲ್ಲಿ ಗುಜರಾತ್ ನ ಉಚ್ಚ ನ್ಯಾಯಾಲಯದ ಮುಂದೆ ಕೇಂದ್ರ ಗೃಹಸಚಿವಾಲಯ ಮಂಡಿಸಿದ ಮೊದಲ ಅಫಿಡವಿಟ್ ಸಹ ಇದೇ ಅಂಶವನ್ನು ಪುಷ್ಟೀಕರಿಸಲಾಗಿತ್ತು. ಆದರೆ, ಅಂದಿನ ಕೇಂದ್ರ ಗೃಹಸಚಿವ ಚಿದಂಬರಂ ಅವರಿಗೆ ಈ ಬಗ್ಗೆ ಅಸಮ್ಮತಿಯಿದ್ದ ಕಾರಣ ಮರು ಅಫಿಡವಿಟ್ ಸಲ್ಲಿಸುವ ಪ್ರಮೇಯ ಉದ್ಭವಿಸಿತು, ಹಾಗೆ ಮರುಸಲ್ಲಿಕೆಯಾದ ಅಫಿಡವಿಟ್ ನಲ್ಲಿ ಇಶ್ರತ್ ಜಹಾನ್ ಹಾಗೂ ಲಷ್ಕರ್ ಸಂಘಟನೆಗಳನ್ನು ಬೆಸೆಯುವ ವಾಕ್ಯಗಳನ್ನು ತೆಗೆದು ಹಾಕಲಾಯಿತು ಎಂದು ಪ್ರಕರಣವನ್ನು ಹತ್ತಿರದಿಂದ ಬಲ್ಲ ಹಿರಿಯ ಅಧಿಕಾರಿಗಳು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಹೀಗೆ ಪ್ರಶ್ನೆ ಎತ್ತಿರುವವರು ಇಂದು ಎಲ್ಲಿ ನೆಲೆ ಕಂಡುಕೊಂಡಿದ್ದಾರೆ ಎನ್ನುವುದು ಮತ್ತೊಂದು ವಿಚಾರ.

ಅದೇನೆ ಇದ್ದರೂ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿರುವವರು ಮಾಜಿ ಗೃಹ ಕಾರ್ಯದರ್ಶಿಯಾಗಿದ್ದ ಜಿ ಕೆ ಪಿಳ್ಳೈ ಹಾಗೂ ಅವರ ಸಹೋದ್ಯೋಗಿಯಾಗಿದ್ದ ಮಾಜಿ ಅಧೀನ ಕಾರ್ಯದರ್ಶಿ ಆರ್ ವಿ ಎಸ್ ಮಣಿ. ಇಶ್ರತ್ ಲಷ್ಕರ್ ಆತ್ಮಾಹುತಿ ತಂಡದ ಸದಸ್ಯೆ ಎನ್ನುವುದಕ್ಕೆ ಖಚಿತ ಸಾಕ್ಷ್ಯಗಳು ಇಲ್ಲದೆ ಹೋದ ಕಾರಣಕ್ಕೆ ಹೀಗೆ ಮಾಡಲಾಯಿತು ಎನ್ನುವ ವಾದ ಚಿದಂಬರಂ ಅವರ ಪರವಾಗಿ ಕೇಳಿಬರುತ್ತಿದೆ. ಅದೇನೇ ಇದ್ದರೂ, ಪ್ರಕರಣದ ವಿಚಾರಣೆ ಇರುವುದು ಅಂದು ನಡೆದ ಎನ್ ಕೌಂಟರ್ ಅಸಲಿಯೋ, ನಕಲಿಯೋ ಎನ್ನುವ ಬಗ್ಗೆಯೇ ಹೊರತು ಇಶ್ರತ್ ಜಹಾನ್ ಳ ಪೂರ್ವಾಪರವನ್ನುಕುರಿತದ್ದಲ್ಲ.

ಒಂದು ವೇಳೆ ಆಕೆ ಲಷ್ಕರ್ ನ ಸದಸ್ಯೆಯೇ ಆಗಿದ್ದರೂ ನಕಲಿ ಎನ್ ಕೌಂಟರ್ ಗೆ ನ್ಯಾಯಸಮ್ಮತಿ ದೊರೆಯುವುದಿಲ್ಲ. ಅದೇನಿದ್ದರೂ ಅರಣ್ಯ ನ್ಯಾಯವಾಗಬಹುದು ಅಷ್ಟೆ! ಆಕೆ ಮತ್ತು ತಂಡವನ್ನು ಬಂಧಿಸಿ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಡೆಸಿದ್ದರೆ ದೇಶದಲ್ಲಿ ಅಸ್ಥಿರತೆ ಉಂಟುಮಾಡುವ ಬಾಹ್ಯಶಕ್ತಿಗಳ ಹಾಗೂ ಅದಕ್ಕೆ ಬೆಂಬಲ ನೀಡುವ ಆಂತರಿಕ ಶಕ್ತಿಗಳ ವಿರುದ್ಧ ಭಾರತ ನಡೆಸುತ್ತಿರುವ ಸುದೀರ್ಘ ಹೋರಾಟಕ್ಕೆ ಮತ್ತಷ್ಟು ಕಸುವು ಬರುತ್ತಿತ್ತು ಎನ್ನುವ ಮಾತುಗಳನ್ನು ತಳ್ಳಿಹಾಕಲಾಗದು.

ಅದೇ ವೇಳೆ, ಬೇರಾವುದೇ ರಾಜ್ಯದ ಮುಖ್ಯಮಂತ್ರಿಗಳನ್ನು ಗುರಿ ಮಾಡದೆ ಒಂದು ರಾಜ್ಯದ ಮುಖ್ಯಮಂತ್ರಿಯ ವಿರುದ್ಧವೇ ಏಕೆ ಹತ್ಯೆಯ ಸಂಚು ಮಾಡಲಾಯಿತು? ಇದರ ಹಿಂದೆ ಕೆಲಸ ಮಾಡಿದ ಸಾಮಾಜಿಕ ಅಂಶಗಳಾವುವು? ಮತೀಯ ಹಿಂಸೆಗೆ ತುತ್ತಾದ, ಆಳುವ ಸರ್ಕಾರದ ದಮನಕಾರಿ ನೀತಿಯಡಿ ನಲುಗಿದ ಸಮುದಾಯಕ್ಕೆ ಅರಣ್ಯ ನ್ಯಾಯದ ಮೂಲಕ ಸಾಂತ್ವನ ನೀಡಬೇಕು ಎನ್ನುವ ಮನಸ್ಥಿತಿಯ ಉಗ್ರವಾದದ ಪಾಲು ಈ ಸಂಚಿನ ಹಿಂದೆ ಎಷ್ಟು ಕೆಲಸ ಮಾಡಿತ್ತು? ಇನ್ನು ಮುಂತಾದ ಅನೇಕ ಪ್ರಶ್ನೆಗಳನ್ನು ಮುಖ್ಯವಾಹಿನಿಯಲ್ಲಿ ಗಂಭೀರವಾಗಿ ಚರ್ಚಿಸುವ, ಅರ್ಥೈಸಿಕೊಳ್ಳುವ ಅವಕಾಶ ಈ ಎನ್ ಕೌಂಟರ್ ನಿಂದಾಗಿ ಖಂಡಿತವಾಗಿಯೂ ತಪ್ಪಿದೆ.

ಇಡೀ ಘಟನಾವಳಿಗಳನ್ನು ಅವಲೋಕಿಸಿದರೆ, ಬಹುಶಃ ಚಿದಂಬರಂ ಅವರಿಗೆ ತಮ್ಮ ಸಚಿವಾಲಯದ ಅಡಿ ಬರುತ್ತಿದ್ದ ವಿವಿಧ ಗುಪ್ತಚರ ಸಂಸ್ಥೆಗಳಲ್ಲಿರುವ ಕೆಲ ಅಧಿಕಾರಿಗಳು ಪರೋಕ್ಷವಾಗಿ ಗುಜರಾತ್ ಮುಖ್ಯಮಂತ್ರಿಗಳೆಡೆಗೆ ವಿಶೇಷ ಮುತುವರ್ಜಿ ಬೆಳೆಸಿಕೊಂಡಿರಬಹುದು ಎನ್ನುವ ಬಲವಾದ ಅನುಮಾನವೇನಾದರೂ ಇರಿಸುಮುರಿಸು ಮೂಡಿಸಿತ್ತೇ ಎನ್ನುವ ಪ್ರಶ್ನೆ ಮೂಡದೆ ಇರದು. ಗುಜರಾತ್ ಗಲಭೆಗಳ ಕುರಿತಾದ ನ್ಯಾಯಪ್ರಕ್ರಿಯೆಯಲ್ಲಿ ಪದೇಪದೇ ಉಂಟಾಗುತ್ತಿದ್ದ ಸಾಕ್ಷ್ಯಾಧಾರಗಳ ಕೊರತೆಯ ಹಿಂದೆ ರಾಜ್ಯ ಸರ್ಕಾರದ ಪಕ್ಷಪಾತಿ ಧೋರಣೆ ಇತ್ತು ಎನ್ನುವ ಭಾವನೆ ಇಂದಿಗೂ ಸಾಮಾಜಿಕ ವಲಯದಲ್ಲಿ ಪ್ರಬಲವಾಗಿ ಉಳಿದಿದೆ. ಬಹುಶಃ ಇದುವೇ ‘ದ್ವೇಷಕ್ಕೆ ದ್ವೇಷ, ಸೇಡಿಗೆ ಸೇಡು’ ಎನ್ನುವ ಅರಣ್ಯ ನ್ಯಾಯದತ್ತ ಕೆಲ ಮತೀಯ ಸಂಘಟನೆಗಳು ಮುಖಮಾಡಲು ಕಾರಣವಾಗಿರಬಹುದು.

ಚಿದಂಬರಂ ಅವರು ಅಫಿಡವಿಟ್ ಬದಲಿಸಿದ್ದರ ಹಿಂದೆ ಮತೀಯ ಪಕ್ಷಪಾತಿ ನಿಲುವು ತಳೆದ ಆಪಾದನೆ ಎದುರಿಸುತ್ತಿರುವ ಒಂದು ಸರ್ಕಾರದ ವಿರುದ್ಧ ‘ಅರಣ್ಯನ್ಯಾಯ’ದ ಪರಿದಿಯಡಿ ಹೋರಾಡಲು ಹೊರಟವರ ಬಗ್ಗೆ ಅನುಕಂಪವಿದ್ದಿರಬಹುದೇ ಎನ್ನುವ ಪ್ರಶ್ನೆ ಮುಖ್ಯವಾಗಿ ಮೂಡುತ್ತದೆ. ಈ ಪ್ರಶ್ನೆ ಕೇವಲ ಚಿದಂಬರಂ ಅವರ ವಿರುದ್ಧವೇ ಅಲ್ಲ ಅಂದಿನ ಯುಪಿಎ ಸರ್ಕಾರದ ವಿರುದ್ಧವೂ ಕೇಳಿಬರುತ್ತಿದೆ.

ಅದೇನೇ ಇದ್ದರೂ, ಬಹುಶಃ ಬೇರಿನ್ನಾವುದೇ ಸನ್ನಿವೇಶದಲ್ಲಿ ಈ ಪ್ರಕರಣದ ಕುರಿತಾಗಿ ಪ್ರಶ್ನೆಗಳನ್ನು ಎತ್ತಿದ್ದರೆ ಆಗ ಮೌಲಿಕವಾದ ಚರ್ಚೆ ಸಾಧ್ಯವಿರುತ್ತಿತ್ತು. ಆದರೆ, ಬಿಜೆಪಿಯು ತನ್ನ ಟೀಕಾಕಾರರ ವಿರುದ್ಧ ‘ದೇಶದ್ರೋಹ’ದ ಅಸ್ತ್ರ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಈ ಹೊತ್ತಿನಲ್ಲಿ ಯಾವುದೇ ಘಟನೆಗಳನ್ನೂ ರಾಜಕೀಯೇತರವಾಗಿ ನೋಡಲು ಸಾಧ್ಯವಾಗುತ್ತಿಲ್ಲ. ಅದು ಹೇಗೆ ಉನ್ನತವೂ, ಸೂಕ್ಷ್ಮವೂ ಆದ ಸ್ಥಾನಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾದ ಹಿರಿಯ ಅಧಿಕಾರಿಗಳು ಇಂಥದ್ದೊಂದು ಘಟನೆಯ ಬಗ್ಗೆ ಇದ್ದಕ್ಕಿದ್ದಂತೆ ತುಟಿ ಬಿಚ್ಚುತ್ತಾರೆ? ಇಂಥ ಗಂಭೀರ ‘ರಾಜಕೀಯ ಸಂಚನ್ನು’ ಇಷ್ಟು ದಿನ ತಡೆದು ಈಗ ದೇಶದ ಮುಂದಿಡಲು ಮುಂದಾಗಿರುವುದರ ಹಿಂದಿನ ಉದ್ದೇಶವೇನು? ಹೈದರಾಬಾದ್ ವಿವಿ ಹಾಗೂ ಜೆಎನ್ ಯು ಘಟನಾವಳಿಗಳು ತಾನು ಊಹಿಸದೆ ಇರುವುದಕ್ಕೂ ಹೆಚ್ಚು ದೂರ ಸಾಗಿ ಹೋಗಿರುವುದರ ಬಗ್ಗೆ ಬಿಜೆಪಿಗೆ ಆತಂಕ ಶುರುವಾಗಿದೆಯೇ? ಶತಾಯಗತಾಯ ವಿಷಯಾಂತರ ಮಾಡಬೇಕು ಎನ್ನುವ ಹಟಕ್ಕೆ ಬಿದ್ದು ಕೈಗೆ ಸಿಕ್ಕ ಅಸ್ತ್ರಗಳನ್ನೆಲ್ಲ ಪ್ರಯೋಗಿಸಲು ಅದು ಮುಂದಾಗುತ್ತಿದೆಯೇ?

ಇದೆಲ್ಲವನ್ನು ಗಮನಿಸಿದರೆ, ಹೇಗೆ ರೋಗಗಳು ಜೀವಂತ ಮನುಷ್ಯನ ಸೂಚನೆಯೋ, ಅದೇ ರೀತಿ ಸಂಚುಗಳೂ ಸಹ ಜೀವಂತ ರಾಜಕಾರಣದ ಸೂಚನೆ ಎನ್ನಬಹುದೇನೋ! ಆದರೆ, ಉತ್ತಮವಾದುದನ್ನಲ್ಲದೆ ಬೇರಾವುದನ್ನೂ ಒಪ್ಪಬಾರದು ಎನ್ನುವ ಮನಸ್ಸುಗಳಿಗೆ ಇಲ್ಲೊಂದು ಪಾಠವಿದೆ. ಹೇಗೆ ರೋಗಗಳು ಸಂತುಲನೆ ತಪ್ಪಿದ ಅಸ್ವಸ್ಥ ದೇಹದ ಸೂಚನೆಗಳೋ, ಹಾಗೆಯೇ ಸಂಚುಗಳು ಮೌಲಿಕ ವಿಚಾರಗಳು ಹತಗೊಂಡ ಅಸ್ವಸ್ಥ ರಾಜಕಾರಣದ ಸೂಚನೆಗಳು ಎನ್ನುವುದು. ಬಿಜೆಪಿ ಹಾಗೂ ಕಾಂಗ್ರೆಸ್ ಇಂಥ ಅಸ್ವಸ್ಥ ರಾಜಕಾರಣದ ಆಚೆಗೆ ಬೆಳೆಯುವುದೇ ಇಲ್ಲವೇ?!

nkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನಾಶವಾಗಬೇಕಾದದ್ದು ಧರ್ಮವೋ?  

ಮುಂದಿನ ಸುದ್ದಿ »

ಮಾರ್ಚ್ ತಿಂಗಳು ಮತ್ತು ಪರೀಕ್ಷೆಗಳು

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×