Thursday February 25 2016

Follow on us:

Contact Us

ಪ್ರಬುದ್ಧ ದೇಶಕ್ಕೆ ಬೇಕಿರುವುದು ವೈಚಾರಿಕತೆ, ವಿವೇಕವೇ ಹೊರತು ಭಾವೋದ್ರೇಕವಲ್ಲ

nataraju-v11211-12111

-ನಟರಾಜು ವಿ

ಏಕ ಸಂಸ್ಕೃತಿಯ ರಾಷ್ಟ್ರೀಯತೆಯ ಕಲ್ಪನೆ ಹಾಗೂ ಅದನ್ನು ಆಧರಿಸಿ ಕಟ್ಟಿಕೊಳ್ಳುವ ಭಾವಾವೇಶದ ದೇಶಭಕ್ತಿ ಹೇಗೆ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಸಾಗುತ್ತದೆ ಎನ್ನುವುದಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ, ನಡೆಯುತ್ತಿರುವ ಇತ್ತೀಚಿನ ಘಟನಾವಳಿಗಳು ಬಲವಾದ ಸಾಕ್ಷ್ಯವನ್ನು ನೀಡಿವೆ.

ದೇಶಭಕ್ತಿ ಎನ್ನುವ ಪರಿಕಲ್ಪನೆಯನ್ನು ಹೇಗೆ ಒಂದು ಸೀಮಿತ ಮಾದರಿಯ ನೋಟಕ್ರಮವನ್ನು ಮಾತ್ರವೇ ಹೇರಲು ಬಳಸಬಹುದು, ದೇಶಭಕ್ತಿಯ ಹೆಸರಿನಲ್ಲಿ ಹೇಗೆ ಮುಕ್ತ ಆಲೋಚನೆ, ಚರ್ಚೆಗಳನ್ನು ಮಿತಿಗೊಳಿಸಬಹುದು ಎನ್ನುವುದನ್ನು ಈ ಘಟನಾವಳಿಗಳು ನಿರೂಪಿಸಿವೆ. ಇದೀಗ ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿಯೂ ಆಡಳಿತ ಚುಕ್ಕಾಣಿ ಹಿಡಿದಿರುವ ಪಕ್ಷ ಇದನ್ನೇ ಎತ್ತಿಹಿಡಿಯುವ ಪ್ರಯತ್ನ ಮಾಡುತ್ತಿದೆ.

ದೇಶಭಕ್ತಿ ಹಾಗೂ ಪ್ರಜಾಪ್ರಭುತ್ವ ನೀಡಿರುವ ವ್ಯಕ್ತಿ ಸ್ವಾತಂತ್ರ್ಯ ಇವೆರಡನ್ನೂ ಒಂದರ ಬೆನ್ನಿಗೆ ಒಂದು ಆತು ನಿಂತ ಪೂರಕ ಪರಿಕಲ್ಪನೆಗಳಾಗಿ, ಅವಳಿಗಳಾಗಿ ಬಹುತೇಕ ಭಾರತೀಯರು ತೀರಾ ಈಚಿನವರೆಗೆ ನಂಬಿದ್ದರು. ಆದರೆ ಈ ಎರಡು ಗ್ರಹಿಕೆಗಳು ಸಂಘರ್ಷಾತ್ಮಕವಾಗಿಯೂ ಎದಿರಾಗಬಹುದು ಎನ್ನುವ ವಾಸ್ತವದ ಭಯ, ಆತಂಕಗಳನ್ನು ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣ ಹಾಗೂ ಪಟಿಯಾಲ ಕೋರ್ಟ್ ಆವರಣದಲ್ಲಿ ನಡೆದ ಘಟನಾವಳಿಗಳು ಹೇಳುತ್ತಿವೆ. ಈ ಆತಂಕವನ್ನು ಮತ್ತೂ ಹತ್ತಿರದಿಂದ ನೋಡುವುದಾದರೆ, ಭಾವುಕ ರಾಷ್ಟ್ರೀಯವಾದ ಹಾಗೂ ವಿಚಾರವಾದಗಳು ಸಂರಚನಾತ್ಮಕವಾಗಿ ಎದುರಾಗದೆ, ಸಂಘರ್ಷಾತ್ಮಕವಾಗಿ ಎದುರಾಗುವಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಗೋಚರಿಸುತ್ತದೆ.

ವಿಚಾರವಾದದ ಹರಿತತೆಯನ್ನು ಹಿಂಸೆಯಿಂದಲೇ ಹಿಮ್ಮೆಟ್ಟಿಸಬೇಕು ಎನ್ನುವ ಧೋರಣೆ ಇಂದು ಬಲಗೊಳ್ಳುತ್ತಿದೆ. ದೇಶದೆಲ್ಲೆಡೆ ಅಸಹಿಷ್ಣುತೆಯ ಕೂಗು ಕೇಳಿಬಂದಾಗಲೇ ಇಂಥದ್ದೊಂದು ಭಯವನ್ನು ಊಹಿಸಲಾಗಿತ್ತು. ಆದರೆ ಅಸಹಿಷ್ಣುತೆಗೆ ಕಾರಣವಾದ ಘಟನಾವಳಿಗಳನ್ನು ಒಂದಕ್ಕೊಂದು ಸಂಬಂಧವಿಲ್ಲದ ಬಿಡಿ ಬಿಡಿ ಘಟನೆಗಳು ಎಂದು ವ್ಯಾಖ್ಯಾನಿಸುವಲ್ಲಿ ಕೇಂದ್ರ ಸರ್ಕಾರ ವ್ಯಸ್ತವಾಯಿತು. ಇಂಥ ಭಯವನ್ನು ಗುರುತಿಸಿದ ಬುದ್ಧಿಜೀವಿಗಳನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಪ್ರಯತ್ನವನ್ನು ಬಲಪಂಥೀಯ ಸಂಘಟನೆಗಳು ಮಾಡಲಾರಂಭಿಸಿದವು.

ಈಗ ಈ ಪ್ರಯತ್ನಗಳು ಹೆಚ್ಚು ನಿಚ್ಚಳವಾಗಿ ತೋರುತ್ತಿವೆ. ಇದಾಗಲೇ ದೇಶದ್ರೋಹಿಗೆ ಸಮಾನಾರ್ಥಕ ಪದ ಬುದ್ಧಿಜೀವಿ ಎಂದು ಜನಪ್ರಿಯವಾದ ಆದರೆ ಜನಪರವಲ್ಲದ ಅಪಹಾಸ್ಯಗಳ ಮೂಲಕ ಹೇಳಲಾಗುತ್ತಿದೆ. ಈ ದೇಶದ ಪ್ರಜೆಗಳು ಎಂಥ ಚಿಂತನೆಗಳನ್ನು ಮಾತ್ರವೇ ಆಲಿಸಬೇಕು, ಯಾವ ನೋಟ ಕ್ರಮವನ್ನು ಮಾತ್ರವೇ ಹೊಂದಿರಬೇಕು ಎನ್ನುವ ಪರೋಕ್ಷ ಇಂಗಿತ, ಎಚ್ಚರಿಕೆ ಇಂಥ ಭಾಷೆಯ ಹಿಂದಿರುತ್ತದೆ.

ಭಾರತದ ಸಾರ್ವಭೌಮತೆ, ಅಖಂಡತೆಯ ಬಗ್ಗೆ ಈ ದೇಶದ ಎಲ್ಲರಿಗೂ ಕಾಳಜಿ ಇದೆ; ಪ್ರಜ್ಞಾವಂತರಿಗೆ, ಬುದ್ಧಿಜೀವಿಗಳಿಗೆ ತುಸು ಹೆಚ್ಚೇ ಇದೆ. ಅದೇ ವೇಳೆ ಭಾರತದ ಸಾರ್ವಭೌಮತೆ ಎನ್ನುವುದು ಸಂರಚನಾತ್ಮಕವಾದ ನೆಲೆಗಟ್ಟಿನಲ್ಲಿ, ನಮ್ಮ ಪೂರ್ವಸೂರಿಗಳು ಹಾಕಿಕೊಟ್ಟಿರುವ ಉನ್ನತ ಮೌಲ್ಯಗಳಡಿಯಲ್ಲಿ, ಸಾಂವಿಧಾನಿಕ ಆಶಯಗಳಡಿಯಲ್ಲಿ ರೂಪುಗೊಳ್ಳಬೇಕೇ ಹೊರತು, ದಮನಕಾರಿ ಪ್ರವೃತ್ತಿಗಳ ಮೂಲಕ, ಚರ್ಚೆ, ವಿಚಾರ ಭೇದಗಳನ್ನು ಹತ್ತಿಕ್ಕುವ ಮೂಲಕ ಅಲ್ಲ ಎನ್ನುವ ಖಚಿತತೆಯನ್ನು ಈ ವರ್ಗ ಹೊಂದಿದೆ.

ಇದುವೇ ಪ್ರಜಾಪ್ರಭುತ್ವದ ಆಶಯ, ಸಾಂವಿಧಾನಿಕ ಆಶಯ ಕೂಡ. ಇದುವೇ ನಿಜವಾದ ದೇಶಭಕ್ತಿ. ಇದರಲ್ಲಿ ಫ್ಯಾಸಿಸಂನ ಲವಲೇಷವೂ ಕಾಣುವುದಿಲ್ಲ. ನಾವು ವಾಸಿಸುವ ದೇಶ, ಸಮಾಜದಲ್ಲಿ ಯಾವುದೇ ಬಗೆಯ ಜೀವವಿರೋಧಿ ನಿಲುವುಗಳಿಗೆ ಆಸ್ಪದವಿರಬಾರದು, ಸಮಾಜ ಸ್ವಸ್ಥವಾಗಿ, ವೈಚಾರಿಕವಾಗಿ ರೂಪುಗೊಳ್ಳಬೇಕು. ನಾವು ಹೆಮ್ಮೆ ಪಡುವ ಭಾರತ, ಜಗತ್ತೇ ಹೆಮ್ಮೆ ಪಡುವಂತಿರಬೇಕು, ಅಂಥ ಮೌಲ್ಯಗಳಡಿ ವಿಕಸಿತವಾಗಬೇಕೇ ಹೊರತು ಧಾರ್ಮಿಕ ಮೂಲಭೂತವಾದ, ಜಾತೀಯ ಸಂಕೋಲೆ, ವೈಚಾರಿಕ ಅಸಹಿಷ್ಣುತೆ, ದಮನಕಾರಿ ನೀತಿಗಳ ಮೂಲಕ ಅಲ್ಲ. ರಾಜಕೀಯ ಆಯ್ಕೆಗಳನ್ನು ಹತ್ತಿಕ್ಕುವ ಮೂಲಕವಂತೂ ಅಲ್ಲವೇ ಅಲ್ಲ.

ನಮ್ಮ ದೇಶದ ಅಖಂಡತೆಯ ಬಗ್ಗೆ ಒಲವುಳ್ಳವರು ಬೆಳೆಸಿಕೊಳ್ಳಬೇಕಿರುವುದು ಭಾವೋದ್ವೇಗವನ್ನಲ್ಲ, ಬದಲಿಗೆ ಸಂಯಮ, ಸ್ಥಿತಪ್ರಜ್ಞೆ. ವೈಚಾರಿಕತೆಗಳನ್ನು. ನಮ್ಮ ದೇಶಭಕ್ತಿ ಮಾನವೀಯತೆ, ವೈಚಾರಿಕತೆಯ ನೆಲೆಗಟ್ಟಿನಲ್ಲಿ ದೃಢವಾಗಿ ನಿಂತಿರಬೇಕೆ ಹೊರತು ಬಾಲಿಶ ಭಾವಾವೇಶಗಳಲ್ಲಲ್ಲ. ದೇಶಭಕ್ತರೆಲ್ಲರೂ ಇಂದು ತಮ್ಮ ಶಕ್ತಿಯನ್ನು ದುಡಿಸಿಕೊಳ್ಳಬೇಕಿರುವುದು (ಅಹಿಂಸಾತ್ಮಕವಾಗಿ) ನಮ್ಮ ಸಮಾಜವನ್ನು ಪದೇಪದೇ ಕಟ್ಟಿಹಾಕುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಸಮಾನತೆಗಳ ವಿರುದ್ಧ.

ಈ ದೇಶದಲ್ಲಿ ಪಕ್ಷಾತೀತವಾಗಿ ಹಬ್ಬುತ್ತಿರುವ ಭ್ರಷ್ಟತೆ, ಲೂಟಿಕೋರತನಗಳ ವಿರುದ್ಧ. ಸಾರ್ವಜನಿಕ ಬದುಕಿನಲ್ಲಿ ಮೌಲ್ಯಗಳು ಕಾಣೆಯಾಗಲು ಕಾರಣವಾದ ಅಂಶಗಳ ವಿರುದ್ಧ; ಈ ದೇಶದ ನೆಲ, ಜಲ ಸಂಪತನ್ನು ಬೇಕಾಬಿಟ್ಟಿಯಾಗಿ ಖಾಸಗಿಯವರಿಗೆ ಬಿಕರಿ ಮಾಡುವ ನೀತಿಗಳ ವಿರುದ್ಧ. ಇದಾವುದರ ಬಗ್ಗೆಯೂ ಕನಿಷ್ಠ ಸಹಾನುಭೂತಿ, ಸಹಮತವೂ ಇಲ್ಲದ ಮಂದಿ ಭಾರತಮಾತೆಗೆ ಜೈಕಾರವನ್ನು ಹಾಕಿದರೆ ಅದು ಭಾರತಾಂಬೆಗೆ ಮಾಡುವ ಅವಮಾನ ಮಾತ್ರ. ಅಂಥ ‘ದೇಶಭಕ್ತಿ’, ‘ದೇಶಭಕ್ತ’ರ ಬಗ್ಗೆ ಸಹಜವಾಗಿಯೇ ಈ ದೇಶದ ಉನ್ನತಿಯನ್ನು ಬಯಸುವ ಎಲ್ಲ ಮಾನವೀಯ ಹೃದಯವುಳ್ಳವರೂ, ವೈಚಾರಿಕರೂ ಅನುಮಾನ ಪಡುತ್ತಾರೆ.

ವಿಚಾರವಾದವನ್ನು ಗೋರಿಯಲ್ಲಿ ಹೂತು, ವಿವೇಕವನ್ನು ಬೆಂಕಿಗಿಟ್ಟು ಬೀದಿಗಿಳಿಯುವ ಈ ಮಂದಿ ಕೇವಲ ಹಿಂಸಾವಿನೋದಿಗಳಾಗಲು ಮಾತ್ರ ಸಾಧ್ಯ. ಇವರು ಶಕ್ತಿಯಲ್ಲಿ, ಹಿಂಸೆಯಲ್ಲಿ ನಂಬಿಕೆಯಿಟ್ಟವರು, ದೌರ್ಜನ್ಯ, ದಮನಕಾರಿ ಪ್ರವೃತ್ತಿಗಳಲ್ಲಿ ನಂಬಿಕೆ ಇಟ್ಟವರು, ಬರಿದೆ ಭಾವೋದ್ರೇಕವನ್ನೇ ನೆಚ್ಚಿಕೊಂಡವರು. ಇಂಥ ಮನಸ್ಥಿತಿಯಿಂದ ಸಮಾಜದಲ್ಲಿ ಹಿಂಸೆಯನ್ನಷ್ಟೇ ಪ್ರಚೋದಿಸಲು ಸಾಧ್ಯ. ಇದೇ ಮಾತು ಜಗತ್ತಿನೆಲ್ಲೆಡೆಯ ಪ್ರಭುತ್ವಗಳಿಗೂ ಅನ್ವಯಿಸುತ್ತದೆ. ಪ್ರಜೆಗಳ ಹಿತವನ್ನು ಕಡೆಗಣಿಸಿ, ಅವರ ದನಿಗಳನ್ನು ಆಲಿಸದೆ ಹಿಂಸೆಯ ಬಲದಿಂದ ಅವರನ್ನು ಮೆಟ್ಟಲು ಹೊರಟ ಸರ್ವಾಧಿಕಾರಿ ಮನಸ್ಥಿತಿಯ ಪ್ರಭುತ್ವಗಳು ಹಿಂಸೆಗೆ ಬದಲಾಗಿ ಹಿಂಸೆಯನ್ನೇ ಪಡೆದಿವೆ, ಜನರ ವಿಶ್ವಾಸವನ್ನು ಕಳೆದುಕೊಂಡಿವೆ. ಈ ಸತ್ಯಕ್ಕೆ ಯಾವುದೇ ಪಕ್ಷ, ದೇಶ ಹೊರತಲ್ಲ.

ನಮ್ಮ ದೇಶದಲ್ಲಿ ಮಾನವೀಯ ಮೌಲ್ಯಗಳಷ್ಟೇ ವಿಜೃಂಭಿಸಬೇಕು ಎಂದು ಬಯಸುವ ಎಲ್ಲರೂ ಈ ದೇಶವನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳ ಬಗ್ಗೆ ಮುಕ್ತ ಹಾಗೂ ನಿರ್ಭೀತ ಚರ್ಚೆಗಳು ಮುಖ್ಯವಾಹಿನಿಯಲ್ಲಿ ನಡೆಯಬೇಕು ಎಂದು ಒತ್ತಾಯಿಸಬೇಕು. ಕಾಶ್ಮೀರದಿಂದ ಹಿಡಿದು ಹೈದರಾಬಾದ್ ಕರ್ನಾಟಕದವರೆಗಿನ ಸಮಸ್ಯೆಗಳ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು, ಗಣ್ಯರು, ಬುದ್ಧಿಜೀವಿಗಳು, ಪ್ರಜ್ಞಾವಂತರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ, ಚಿಕಿತ್ಸಕವಾಗಿ, ಚರ್ಚಿಸಬೇಕು. ಎಲ್ಲರ ವಿಚಾರಗಳನ್ನೂ ಮುಕ್ತವಾಗಿ ಆಲಿಸುತ್ತ ಈ ದೇಶದ ಯುವಪೀಳಿಗೆ, ಭವಿಷ್ಯದ ಪೀಳಿಗೆ ರೂಪುಗೊಳ್ಳಬೇಕೆ ಹೊರತು ಯಾವುದೇ ಒಂದು ಮತ, ಪಂಥ, ವಾದಗಳ ಹಿನ್ನೆಲೆಯಲ್ಲಿ ಅಲ್ಲ.

ಹೀಗೆ ಮುಕ್ತವಾಗಿ ವೈಚಾರಿಕತೆ, ಜ್ಞಾನ, ವಿವೇಕವನ್ನು ಬೆಳೆಸಿಕೊಂಡ ಸಮುದಾಯ ಮಾತ್ರ ತನ್ನ ನೆಲದ ಸಮಸ್ಯೆಗಳನ್ನು ಪ್ರಬುದ್ಧತೆಯಿಂದ ಪರಿಹರಿಸಿಕೊಳ್ಳಬಲ್ಲದು. ವೈಚಾರಿಕತೆಯಿಲ್ಲದ ಯಾವುದೇ ದೇಶ, ಸಮಾಜ ಉಜ್ವಲ ಭವಿಷ್ಯವನ್ನು ಕಾಣಲಾರದು. ಸಮಕಾಲೀನ ಜಾಗತಿಕ ಬಿಕ್ಕಟ್ಟುಗಳು, ಮನುಕುಲದ ಇತಿಹಾಸ ಇದನ್ನು ಸಾರಿ ಸಾರಿ ಹೇಳುತ್ತಿವೆ.

ನೈಜ ಪ್ರಜಾಪ್ರಭುತ್ವದಲ್ಲಿ ಸ್ವಸ್ಥವೂ, ಚಿಕಿತ್ಸಕವೂ ಆದ ಚರ್ಚೆಗಳಿಂದ ಹೊರಗಿಡುವ ವಸ್ತು, ವಿಷಯಗಳು ಯಾವುದೂ ಇಲ್ಲ, ಅಂಥ ವಸ್ತು-ವಿಷಯಗಳೇನಾದರೂ ಇದ್ದರೆ ಆ ವ್ಯವಸ್ಥೆಯನ್ನು ಪ್ರಜಾಪ್ರಭುತ್ವವೆಂದು ಕರೆಯಲಾಗದು. ಯಾವುದೇ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯತೆಯ ಹೆಸರಿನಲ್ಲಾಗಲಿ, ದೇಶಭಕ್ತಿ, ಧಾರ್ಮಿಕತೆಗಳ ಹೆಸರಿನಲ್ಲಾಗಲಿ ಯಾವುದಾದರೂ ಚರ್ಚೆಗಳನ್ನು ಮೊಟಕುಗೊಳಿಸಲಾಗುತ್ತದೆ ಎಂದರೆ ಅದು ಪ್ರಜಾಪ್ರಭುತ್ವದ ಆಶಯಗಳಿಗೆ, ಸಾಂವಿಧಾನಿಕ ಆಶಯಗಳಿಗೆ ಬಗೆಯುವ ದ್ರೋಹವಾಗುತ್ತದೆ.

ಕೊನೆಯ ಮಾತು, ದೇಶದ್ರೋಹ ಎಂದರೆ ಏನು? ದೇಶದ್ರೋಹದ ಚಟುವಟಿಕೆಗಳು ಯಾವುವು? ಅದಕ್ಕೆ ಏನು ಶಿಕ್ಷೆ ನೀಡಬೇಕು? ಎನ್ನುವುದನ್ನು ಹೇಳಲು, ವಿವರಿಸಲು ಕಾನೂನು ತಜ್ಞರಿದ್ದಾರೆ, ದೇಶದ ಘನತೆಯನ್ನು, ನ್ಯಾಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನ್ಯಾಯಾಂಗ ವ್ಯವಸ್ಥೆ ಇದೆ. ಕಾಲದಿಂದ ಕಾಲಕ್ಕೆ ಖಾಯಿದೆ, ಕಾನೂನುಗಳ ವಿಚಾರದಲ್ಲಿ ಉಂಟಾಗುವ ಗೊಂದಲವನ್ನು ಪರಿಹರಿಸಿಕೊಳ್ಳಲು ಸಮರ್ಥವಾದ ನ್ಯಾಯಾಂಗ, ಶಾಸಕಾಂಗದ ವ್ಯವಸ್ಥೆಗಳನ್ನು ನಮ್ಮ ಸಂವಿಧಾನ ರೂಪಿಸಿಕೊಟ್ಟಿದೆ. ಕಾನೂನಿನ ಚೌಕಟ್ಟಿನಲ್ಲಿ ಬರುವ ಪ್ರತಿ ಪದದ ಅರ್ಥವ್ಯಾಪ್ತಿಯನ್ನು ನಿಷ್ಕರ್ಷಿಸಲು, ಸಾಮಾಜಿಕ ಬದಲಾವಣೆಯ ಚಹರೆಯ ಹಿನ್ನೆಲೆಯಲ್ಲಿ ಕಾನೂನಿನ ಯಾವ ಅಂಶಗಳನ್ನು ಪರಿಶೀಲಿಸಬೇಕು ಎನ್ನುವ ವಿವೇಚನಾಯುತ ನಿರ್ಧಾರವನ್ನು ಮಾಡಲು ಅತ್ಯಂತ ಸಮರ್ಥವಾದ ವ್ಯವಸ್ಥೆ, ವಿಚಾರವಂತ, ಪ್ರಬುದ್ಧ, ಪರಿಣತ ಸಮುದಾಯ ಈ ದೇಶದಲ್ಲಿ ಯಾವತ್ತೂ ಇದೆ. ಈ ವಿಶ್ವಾಸವೇ ಇಲ್ಲಿನ ಪ್ರಜ್ಞಾವಂತ ಸಮೂಹದಲ್ಲಿ ದೇಶಭಕ್ತಿಯಾಗಿ ಧ್ವನಿಸುತ್ತಿರುವುದು. ಈ ವಿಶ್ವಾಸವನ್ನು ಬಲಗೊಳಿಸುತ್ತ, ನಮ್ಮ ಸಮಾಜವನ್ನು ವೈಚಾರಿಕವಾಗಿ ಕಟ್ಟುತ್ತಾ, ಎಲ್ಲ ದಮನಕಾರಿ ಪ್ರವೃತ್ತಿಗಳಾಚೆಗಿನ ಘನತೆಯ ಜೀವನಕ್ಕಾಗಿ ಶ್ರಮಿಸುತ್ತ ವಿರಮಿಸದೆ ಸಾಗೋಣ. ಅದುವೇ ದೇಶ ಸೇವೆ.

nkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಹೃದಯ ಸ್ಪರ್ಶಿ ಸಂವೇದನೆಗಳು ಮತ್ತೆಂದೂ ಸಹಜತೆಯತ್ತ ಮರಳದಷ್ಟು ಡಿಜಿಟಲೀಕರಣವಾಗಿ ಬಿಟ್ಟಿದೆಯೇನೋ…?

ಮುಂದಿನ ಸುದ್ದಿ »

ಸಾಮಾಜಿಕ ಜಾಲತಾಣಗಳು ಮತ್ತು ಇತ್ತೀಚಿನ ಘಟನೆಗಳು…

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×