Thursday March 24 2016

Follow on us:

Contact Us

ಐಸಿಸ್ ಹಚ್ಚುವ ಕಿಡಿ ಎದುರಿಸಲು ಚಿಂತನೆಗಳ ಬೆಳಕು ಬೇಕು

nataraju-v11211-12111111

-ನಟರಾಜು ವಿ

ಬ್ರಸೆಲ್ಸ್ ದಾಳಿಯ ನಂತರ ಐಸಿಸ್ ಏನನ್ನು ಯೋಚಿಸುತ್ತಿರಬಹುದು? ಬೆಲ್ಜಿಯಂನ ರಾಜಧಾನಿಯಾದ ಬ್ರಸೆಲ್ಸ್, ಐರೋಪ್ಯ ಒಕ್ಕೂಟದ ಎಲ್ಲ ಪ್ರಮುಖ ಸಂಸ್ಥೆಗಳನ್ನು ಹೊಂದಿರುವ ಪೀಠಸ್ಥ ನಗರಿ ಕೂಡ. ಹಾಗಾಗಿಯೇ ಅದನ್ನು ಐರೋಪ್ಯ ಒಕ್ಕೂಟದ ಅಘೋಷಿತ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ಇಂಥ ಪ್ರಮುಖ ನಗರದ ಮೇಲೆ ನಡೆದ ದಾಳಿಯನ್ನು ಐರೋಪ್ಯ ಒಕ್ಕೂಟದ ಸಮಗ್ರತೆಗೆ ಒಡ್ಡಿದ ಸವಾಲು ಎಂದು ಯುದ್ಧೋತ್ಸಾಹಿಗಳು ಪರಿಗಣಿಸಬಹುದು. ಅದೇ ವೇಳೆ ಅನಧಿಕೃತವಾದ ‘ಇರಾಕ್ ಮತ್ತು ಸಿರಿಯಾವನ್ನು ಒಳಗೊಂಡ ಇಸ್ಲಾಮಿಕ್ ರಾಜ್ಯ (ಐ ಎಸ್ ಐ ಎಸ್)’ ಐರೋಪ್ಯ ಒಕ್ಕೂಟವನ್ನು ತೀಕ್ಷ್ಣವಾಗಿ ಕೆಣಕಲೆಂದೇ ಸಂಘಟಿಸಿದ ದಾಳಿ ಎಂದೂ ವಿವರಿಸಬಹುದು. ಈ ಎರಡರ ನಡುವೆ ಅಂಥ ವ್ಯತ್ಯಾಸವೇನಿದೆ ಎನ್ನುವ ಪ್ರಶ್ನೆ ಇಲ್ಲಿ ಮೂಡಬಹುದು.

ಈ ಎರಡರ ನಡುವಿನ ವ್ಯತ್ಯಾಸವೇ ಐರೋಪ್ಯ ಒಕ್ಕೂಟಗಳು ಮುಂದಿನ ದಿನಗಳಲ್ಲಿ ಐಸಿಸ್ ವಿರುದ್ಧ ಯಾವ ರೀತಿಯ ರಣತಂತ್ರವನ್ನು ಅನುಸರಿಸಲಿವೆ ಎನ್ನುವುದನ್ನು ವಿವರಿಸಲಿರುವುದು.

ಈ ಪ್ರಶ್ನೆಗಳನ್ನು ಗಮನಿಸುವುದಕ್ಕೂ ಮುನ್ನ, ಕೆಲವೊಂದು ವಿಚಾರಗಳನ್ನು ಪೂರಕವಾಗಿ ಪ್ರಸ್ತಾಪಿಸಬೇಕು. ಬ್ರಸೆಲ್ಸ್ ಹೇಗೆ ಐರೋಪ್ಯ ಒಕ್ಕೂಟಗಳ ಅಘೋಷಿತ ರಾಜಧಾನಿಯೋ ಅದೇ ರೀತಿ ಐರೋಪ್ಯ ಒಕ್ಕೂಟದಲ್ಲಿ ಅತಿ ಹೆಚ್ಚು ಐಸಿಸ್ ಉಗ್ರರ ಅಡಗುದಾಣ ಕೂಡ. ಬ್ರಸೆಲ್ಸ್ ಸಮೀಪದ ಮೊಲನ್ ಬೀಕ್ ಪ್ರದೇಶದಲ್ಲಿ ಐಸಿಎಸ್ ಉಗ್ರರ ವ್ಯಾಪಕ ಅಡಗುದಾಣಗಳಿವೆ. ಐರೋಪ್ಯ ಒಕ್ಕೂಟದ ಬೇರಾವುದೇ ದೇಶಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಸಮರ್ಥಕರನ್ನು ಐಸಿಸ್ ಬೆಲ್ಜಿಯಂನಿಂದ ಪಡೆದಿದೆ.

2012 ರಿಂದ 2015ರವರೆಗೆ ಐಸಿಸ್ ಪರವಾಗಿ ಹೋರಾಡಲೆಂದೇ ಸುಮಾರು 400ಕ್ಕೂ ಹೆಚ್ಚು ಮಂದಿ ಬೆಲ್ಜಿಯಂ ನಾಗರಿಕರು ಹೋಗಿದ್ದಾರೆ ಎನ್ನುವ ಅಧಿಕೃತ ಅಂಕಿಅಂಶಗಳೇ ಇವೆ. ಇನ್ನೂ ಅನೇಕರನ್ನು ಟರ್ಕಿ, ಲೆಬನಾನ್ ನಂಥ ಕಡೆಗಳಲ್ಲಿ ಅಲ್ಲಿನ ಅಧಿಕಾರಿಗಳು ತಡೆದು ವಾಪಾಸು ಕಳುಹಿಸಿದ ನಿದರ್ಶನಗಳೂ ಯಥೇಚ್ಛವಾಗಿವೆ. ಬೆಲ್ಜಿಯಂನಂಥ ದೇಶದಲ್ಲಿ ಐಸಿಸ್ ತನ್ನ ಉಗ್ರ ಸಮರ್ಥಕರನ್ನು ಪಡೆಯಲು ಹೇಗೆ ಸಾಧ್ಯವಾಯಿತು ಎನ್ನುವುದು ಚರ್ಚಿಸಲು ಅರ್ಹವಾದ ವಿಷಯ. ಸುಪ್ತವಾಗಿರುವ ಜನಾಂಗೀಯ ದ್ವೇಷ, ಅಸಮಾಧಾನಗಳು ಐಸಿಸ್ ನೆಲೆ ಕಾಣಲು ಪ್ರಚೋದನೆ ನೀಡಿರಬಹುದೇ? ಐಸಿಸ್ ಕಡೆ ವಾಲಿರುವ ಮಂದಿ ಸಮಾಜದ ಮುಖ್ಯವಾಹಿನಿಯೊಂದಿಗೆ ಮಿಳಿತಗೊಳ್ಳದಂತೆ ತಡೆದಿರುವ ಅಂಶಗಳಾವುವು? ಇಲ್ಲಿನ ಇಸ್ಲಾಂ ಧರ್ಮೀಯರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಯಾವ ಸ್ಥಾನಮಾನಗಳನ್ನು ಹೊಂದಿದ್ದಾರೆ? ಇನ್ನು ಮುಂತಾದ ಪ್ರಶ್ನೆಗಳನ್ನು ಬೆಲ್ಜಿಯಂನ ಸರ್ಕಾರ ಹಾಗೂ ಸಮಾಜ ಕೇಳಿಕೊಳ್ಳಬೇಕು. ಇಂಥ ಪ್ರಶ್ನೆಗಳು ಐರೋಪ್ಯ ಒಕ್ಕೂಟದ ಇತರೆ ದೇಶಗಳಿಗೂ ಮುಖ್ಯವಾಗಬೇಕು.

ಈಗ ಹೊರಳಿ, ಈ ಮುಂಚೆ ಪ್ರಸ್ತಾಪಿಸಲಾದ ಪ್ರಶ್ನೆಗಳನ್ನು ಗಮನಿಸುವುದಾದರೆ, ಎಲ್ಲಿಯವರೆಗೆ ಐಸಿಸ್ ಅನ್ನು ಐರೋಪ್ಯ ಒಕ್ಕೂಟಗಳ ಸಮಗ್ರತೆಗೆ ಒಡ್ಡಲಾದ ಸವಾಲು ಎಂದು ನೋಡಲಾಗುತ್ತದೆಯೋ, ಎಲ್ಲಿಯವರೆಗೆ ಐಸಿಸ್ ಒಡ್ಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ರಣರಂಗದಲ್ಲಿ ಮಾತ್ರವೇ ಇದೆ ಎಂದು ತರ್ಕಿಸಲಾಗುತ್ತದೆಯೋ ಅಲ್ಲಿಯವರೆಗೆ ಐಸಿಸ್ ಪರವಾಗಿಯೇ ಎಲ್ಲ ಶಕ್ತಿಗಳೂ ಕೆಲಸ ಮಾಡಿದಂತಾಗುತ್ತದೆ! ಐಸಿಸ್ ಒಂದು ರಾಷ್ಟ್ರವಲ್ಲ, ಅದು ಧಾರ್ಮಿಕ ಮೂಲಭೂತವಾದದ ಒಂದು ಆಲೋಚನಾ ಕ್ರಮ. ಐಸಿಸ್ ಯಾವುದೇ ರಾಜಕೀಯ ಬದ್ಧತೆಗಳಿಂದ, ಪುರೋಗಾಮಿ ಚಿಂತನೆಗಳಿಂದ ಪ್ರೇರಣೆಯನ್ನು ಪಡೆದುದಲ್ಲ. ಐಸಿಸ್ ನ ಕಾರ್ಯಸೂಚಿ ನಿಂತಿರುವುದೇ ಇಸ್ಲಾಂ ಹಾಗೂ ಇಸ್ಲಾಮೇತರ ಶಕ್ತಿಗಳನ್ನು ಸ್ಪಷ್ಟವಾಗಿ ಧ್ರುವೀಕರಣಗೊಳಿಸುವುದರ ಮೇಲೆ.

ಇದಕ್ಕೆ ಪೂರಕವಾಗಿ ಅದು ಎಲ್ಲ ಶಕ್ತಿಗಳನ್ನೂ ದುಡಿಸಿಕೊಳ್ಳುತ್ತದೆ. ಅಮೆರಿಕದ ಯುದ್ಧದಾಹಿತನವನ್ನು ವಿರೋಧಿಸುವವರು ಹೆಚ್ಚು ಹೆಚ್ಚು ಮಾತನಾಡಿದಷ್ಟು ಅದು ಖುಷಿಗೊಳ್ಳುತ್ತದೆ! ಅದೇ ರೀತಿ, ಧಾರ್ಮಿಕ ಮೂಲಭೂತವಾದವನ್ನು ಪಸರಿಸುವವರ ಸಂತತಿ ಹಬ್ಬಿದಾಗಲೂ ಅದು ಪುಳಕಗೊಳ್ಳುತ್ತದೆ! ಐಸಿಸ್ ಹೀಗೆ ಏಕೆ ಕಾಲಕ್ಕೆ ತನ್ನ ಕಾರ್ಯಸೂಚಿಗೆ ಒದಗಿಬರುವ ವೈಚಾರಿಕ ವಿಶ್ಲೇಷಣೆಗಳು, ಮೂಲಭೂತವಾದಿ ಚಿಂತನೆಗಳನ್ನು ಒಳಗೊಳ್ಳುತ್ತ ಶಕ್ತಿಯನ್ನು ಪಡೆಯುತ್ತಿದೆ. ಅದಕ್ಕೆ ಬೇಕಿರುವುದು ‘ಪವಿತ್ರ ಯುದ್ಧ’, ‘ವಿನಾಶ ಮಾತ್ರ’! ಈ ಪವಿತ್ರ ಯುದ್ಧ ಯಾವುದೇ ಒಂದು ಪ್ರದೇಶ, ದೇಶದಲ್ಲಿ ನಡೆಯುವುದಲ್ಲ ಬದಲಿಗೆ ಜಾಗತಿಕವಾಗಿ ನಡೆಯಬೇಕು ಎನ್ನುವುದು ಅದರ ಹಠ. ತಾನು ಆ ಉದ್ದೇಶಕ್ಕಾಗಿ ದುಡಿಯುತ್ತಿರುವ ಭಗವಂತನ ಅನುಗ್ರಹವಿರುವ ಸಂಘಟನೆ ಎನ್ನುವುದು ಅದರ ಭ್ರಮೆ. ಹೀಗೆ ಭ್ರಮೆಗಳಲ್ಲಿರುವವರೊಂದಿಗೆ ಮದ್ದುಗುಂಡುಗಳ ಯುದ್ಧದಿಂದ ಪರಿಣಾಮವಾಗದು.

ಅವರು ತಮ್ಮ ಕೊನೆಯ ಸೋಲನ್ನೂ ಗೆಲುವಿನಡೆಗೆ ಇಟ್ಟ ಮೊದಲ ಹೆಜ್ಜೆ ಎಂದೇ ಭಾವಿಸುತ್ತಿರುತ್ತಾರೆ, ತಮ್ಮ ಸುತ್ತಲಿರುವವರನ್ನು ವಿನಾಶದ ಅಂಚಿಗೆ ಮಾತ್ರವೇ ದೂಡುತ್ತಾರೆ. ಐಸಿಸ್ ನ ಖಾಯಿಲೆಗೆ ಉತ್ತರವಿರುವುದು ಮಾನಸಿಕ ಚಿಕಿತ್ಸೆಯಲ್ಲಿ, ಧಾರ್ಮಿಕ ಸಾಮರಸ್ಯತೆಯಲ್ಲಿ. ವಿಪರ್ಯಾಸವೆಂದರೆ ಮದ್ದುಗುಂಡುಗಳೇ ಹೂಂಕರಿಸುವ ರಣರಂಗದಲ್ಲಿ ಮನಪರಿವರ್ತನೆ ಮಾಡುವ ಶಕ್ತಿಗಳನ್ನು ಇಳಿಸುವುದಾದರೂ ಹೇಗೆ? ‘ಸರ್ವಶಕ್ತ ಭಗವಂತ’ನನ್ನೇ ಮಾನವೀಯತೆಗೆ ವಿರುದ್ಧವಾಗಿ ದುಡಿಸಿಕೊಂಡು ಸಂಭ್ರಮಿಸುವ ಪಾಶವೀ ಮನಸ್ಸುಗಳು ಇಂದು ಎಲ್ಲ ಧರ್ಮಗಳಲ್ಲಿಯೂ ಹಬ್ಬುತ್ತಿವೆ. ಐಸಿಸ್ ಇಂಥ ಖಾಯಿಲೆಯ ಆತ್ಯಂತಿಕ ರೂಪ.

ಐಸಿಸ್ ಅನ್ನು ಮೊದಲು ಐರೋಪ್ಯ ಶಕ್ತಿಗಳು ತಮ್ಮ ನೆಲದಲ್ಲಿ ಮಟ್ಟಹಾಕಬೇಕಿದೆ. ಹೀಗೆ ಮಟ್ಟಹಾಕಬೇಕಿರುವುದು ಸ್ವಸ್ಥ ಚಿಂತನಾಕ್ರಮದ ಮೂಲಕ. ಇಸ್ಲಾಂ ಧರ್ಮೀಯರು ಐರೋಪ್ಯ ರಾಷ್ಟ್ರಗಳಲ್ಲಿ ಶತಮಾನಗಳಿಂದ ನೆಲೆಸಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಅವರು ಮುಖ್ಯವಾಹಿನಿಯೊಂದಿಗೆ ಮಿಳಿತಗೊಂಡಿದ್ದರೆ, ಮತ್ತೆ ಕೆಲ ರಾಷ್ಟ್ರಗಳಲ್ಲಿ ಇದು ಸಾಧ್ಯವಾಗಿಲ್ಲ. ಎಲ್ಲೆಲ್ಲಿ ಇಂಥ ಕಂದರ, ಅಪನಂಬಿಕೆಗಳಿವೆಯೋ ಅಲ್ಲೆಲ್ಲ ಐಸಿಸ್ ಹುಲುಸಾದ ಬೆಳೆ ತೆಗೆಯಲು ಮುಂದಾಗಿದೆ. ಧಾರ್ಮಿಕ ಮೂಲಭೂತವಾದ, ಜನಾಂಗೀಯ ಅಪನಂಬಿಕೆಗಳಿಗೆ ಹೇಗೆ ನಮ್ಮ ಸಮಾಜಗಳು ಬೆಲೆ ತೆರಬೇಕಾಗುತ್ತದೆ ಎನ್ನುವುದನ್ನು ಐರೋಪ್ಯ ರಾಷ್ಟ್ರಗಳು ತಮ್ಮಲ್ಲಿ ನೆಲೆಸಿರುವ ಎಲ್ಲ ಧರ್ಮೀಯರಿಗೂ ಮನವರಿಕೆ ಮಾಡಿಕೊಡಬೇಕು.

ಮುಸ್ಲಿಂ ಯುವ ಸಮುದಾಯ ಮೂಲಭೂತವಾದಿ ಚಿಂತನೆಗಳತ್ತ ಆಕರ್ಷಿತವಾಗುತ್ತಿರುವುದು ಕಂಡು ಬಂದಾಗ ಅವರನ್ನು ಅದರಿಂದ ವಿಮುಖವಾಗಿಸುವ ಸ್ವಸ್ಥ ಚಿಂತನೆ, ಮಾರ್ಗಗಳನ್ನು ಪ್ರಖರವಾಗಿ ಮುಂದಿಡಬೇಕು. ವಿಪರ್ಯಾಸವೆಂದರೆ ಇಲ್ಲಿಯವರೆಗೆ, ಈ ನಿಟ್ಟಿನಲ್ಲಿ ಗಮನಾರ್ಹ ಪ್ರಯತ್ನಗಳಾಗಿಲ್ಲ. ಅದೇ ವೇಳೆ, ಬಹುಸಂಖ್ಯಾತ ಕ್ರಿಶ್ಚಿಯನ್ನರು ಜನಾಂಗೀಯ ದ್ವೇಷದತ್ತ ವಾಲದಂತೆ ವೈಚಾರಿಕ ಎಚ್ಚರ ವಹಿಸಬೇಕಿತ್ತು, ಈ ನಿಟ್ಟಿನಲ್ಲಿಯೂ ಹೇಳಿಕೊಳ್ಳುವಂಥ ಸಾಧನೆಯಾಗಿಲ್ಲ. ಉಳಿದಂತೆ, ನಿರಾಶ್ರಿತರ ಸಮಸ್ಯೆಯನ್ನು ಸ್ವಸ್ಥವಾಗಿ, ಸಮರ್ಥವಾಗಿ ಎದುರಿಸುವ ರಾಜಕೀಯ, ಸಾಮಾಜಿಕ ಪ್ರೇರಣೆಗಳನ್ನು ಐರೋಪ್ಯ ಒಕ್ಕೂಟದ ದೇಶಗಳು ಬದ್ಧತೆಯಿಂದ ತೋರಬೇಕಿದೆ. ಅದೇ ವೇಳೆ ತಮ್ಮನ್ನು ಕೆಣಕುತ್ತಿರುವ ಐಸಿಸ್ ಅನ್ನು ಸಮರ್ಥವಾಗಿ ಎದುರಿಸಲು ಯಾವ ಮಾರ್ಗ ಸಹಕಾರಿ ಎನ್ನುವ ಬಗ್ಗೆ ಐರೋಪ್ಯ ಒಕ್ಕೂಟದಲ್ಲಿ ಗಂಭೀರ ಮಂಥನದ ಅವಶ್ಯಕತೆಯಿದೆ.

ಬಹುಮುಖ್ಯವಾಗಿ ಮಿಲಿಟರಿ ಬಳಕೆ ಎನ್ನುವುದು ಶಸ್ತ್ರಚಿಕಿತ್ಸೆಗೆ ಬಳಸುವ ವೈದ್ಯಕೀಯ ಪರಿಕರದಂತೆ ಇರಬೇಕೆ ಹೊರತು ಅದೇ ಔಷಧಿಯಾಗಲಾರದು ಎನ್ನುವ ಅರಿವು ಒಕ್ಕೂಟಕ್ಕೆ ಮುಖ್ಯವಾಗಬೇಕು. ಇಡೀ ಮಧ್ಯಪ್ರಾಚ್ಯದ ಬಿಕ್ಕಟ್ಟಿಗೆ ಔಷಧಿ ಎನ್ನುವುದು ಏನಾದರೂ ಇದ್ದರೆ ಅದು ಸ್ವಸ್ಥ ರಾಜಕೀಯ, ಸಾಮಾಜಿಕ ಚಿಂತನಾಕ್ರಮಗಳಿಂದ ಮೂಡಬೇಕೆ ಹೊರತು ಮಿಲಿಟರಿ ಬಲವನ್ನು ಆಧರಿಸುವ ಕ್ರಿಯೆ-ಪ್ರತಿಕ್ರಿಯೆ, ಸೇಡು–ಪ್ರತಿ ಸೇಡುಗಳ ಕಿಡಿಯಿಂದ ಅಲ್ಲ.

ಐಸಿಸ್ ಜಾಗತಿಕ ಸಮಾಜದಲ್ಲಿ ಬೆಂಕಿ ಹಚ್ಚಲು ಸಮರ್ಥವಾದ ಕಿಡಿಯೊಂದನ್ನು ಹುಡುಕುತ್ತಿದೆ, ಅದರ ಈ ಸಂಚನ್ನು ತಡೆಯಲು ಕಿಡಿಯಾಗದ ಬೆಳಕೊಂದನ್ನು ರೂಪಿಸುವ ಹೊಣೆಗಾರಿಕೆ ಜಗತ್ತಿನ ಮೇಲಿದೆ, ಮುಖ್ಯವಾಗಿ ಪಾಶ್ಚಾತ್ಯ ರಾಷ್ಟ್ರಗಳ ಹೆಗಲ ಮೇಲೆ…ಬ್ರಸೆಲ್ಸ್ ದಾಳಿ ಐರೋಪ್ಯ ಒಕ್ಕೂಟದ ಸಮಗ್ರತೆಗೆ ಒಡ್ಡಿದ ಸವಾಲು ಎಂದು ಯುದ್ಧೋತ್ಸಾಹಿಗಳು ವಿವರಿಸಿಕೊಳ್ಳುತ್ತಿದ್ದಾರೆ.

nkasv

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ನಕಾರಾತ್ಮಕತೆಯ ಪ್ರಾಬಲ್ಯ ಮತ್ತು ಒಂದು ಸಂಶೋಧನೆ

ಮುಂದಿನ ಸುದ್ದಿ »

ನನ್ನ ಅಪ್ಪ ನನ್ನ ಹೀರೋ…

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×