Friday October 27 2017

Follow on us:

Contact Us

ಟಿಪ್ಪು ಯಾರ ವಿರೋಧಿ?

ಪೂರ್ಣಯ್ಯ

ಲಾಲಾ ಮುಹ್ತಾಬ್ ರಾಯ್
ಹರಿಸಿಂಗ್
ನರಸಿಂಹ ರಾವ್
ಶ್ರೀನಿವಾಸ್ ರಾವ್
ಅಪ್ಪಾಜಿ ರಾವ್
ಶ್ರೀಪತಿ ರಾವ್
ಟಿಪ್ಪು ಸುಲ್ತಾನನು ಮತಾಂಧ, ಕ್ರೂರಿ, ಮತಾಂತರಿ.. ಇತ್ಯಾದಿ ಇತ್ಯಾದಿಗಳೆಲ್ಲ ಆಗಿರುತ್ತಿದ್ದರೆ ಇವರೆಲ್ಲ ತಮ್ಮ ಮೂಲ ಹಿಂದೂ ಗುರುತು ಮತ್ತು ನಂಬಿಕೆಗಳೊಂದಿಗೆ ಆತನ ಬಳಿ ಉನ್ನತ ಸ್ಥಾನದಲ್ಲಿರಲು ಸಾಧ್ಯವಿತ್ತೇ? ದಿವಾನ್ ಕೃಷ್ಣ ರಾವ್ – ವಿತ್ತ ಮಂತ್ರಿ. ಪೂರ್ಣಯ್ಯ- ಕಂದಾಯ ಮಂತ್ರಿ. ಲಾಲಾ ಮುಹ್ತಾಬ್- ಟಿಪ್ಪೂವಿನ ಆಪ್ತ ಕಾರ್ಯದರ್ಶಿ. ರಾಮ್ ರಾವ್ ಮತ್ತು ಶಿವಾಜಿ – ಅಶ್ವ ದಳದ ದಂಡನಾಯಕರು. ಶ್ರೀನಿವಾಸ ರಾವ್, ಮೂಲಚಂದ್  ಮತ್ತು ಅಪ್ಪಾಜಿ ರಾವ್‍ರು ಟಿಪ್ಪುವಿನ ವಿಶೇಷ ರಾಯಭಾರಿಗಳು. ಟಿಪ್ಪುವಿನ ಆಡಳಿತದಲ್ಲಿ ಹಿಂದೂಗಳು ಬಹುಸಂಖ್ಯೆಯಲ್ಲಿ ಅಧಿಕಾರಿಗಳಾಗಿರುವುದನ್ನು ಆತನ ಇತಿಹಾಸವನ್ನು ವಿವರಿಸುವ ಒಂದಕ್ಕಿಂತ ಹೆಚ್ಚು ಕೃತಿಗಳು ಹೀಗೆ ಹೆಸರುಗಳ ಸಮೇತ ಸ್ಪಷ್ಟಪಡಿಸುತ್ತದೆ.

ಅಲ್ಲದೇ, ಇದನ್ನು ಆತನ ವಿರೋಧಿಗಳೂ ನಿರಾಕರಿಸುತ್ತಿಲ್ಲ. ಏನು ಹೇಳಬೇಕು ಇದಕ್ಕೆ? ಇವೆಲ್ಲ ಮತಾಂಧ ರಾಜನೊಬ್ಬನ ಎಡವಟ್ಟುಗಳೋ ಅಥವಾ ಆತನಿಗೆ ಮತಾಂಧತೆಯ ಹಣೆಪಟ್ಟಿ ಹಚ್ಚಿದವರ ವೈರುಧ್ಯಗಳೋ? 1791ರಲ್ಲಿ ರಘುನಾಥ್ ರಾವ್ ನೇತೃತ್ವದ ಮರಾಠ ದಾಳಿಕೋರರು ಶೃಂಗೇರಿಯ ಶಾರದಾ ಮಂದಿರಕ್ಕೆ ಹಾನಿ ಮಾಡಿದರು. ಸ್ವರ್ಣ ಪಲ್ಲಕ್ಕಿಯನ್ನು ಹೊತ್ತೊಯ್ದರು. ಶಾರದಾ ದೇವಿಯ ಮೂರ್ತಿಯನ್ನು ಗರ್ಭಗುಡಿಯಿಂದೆತ್ತಿ ಹೊರಗೆಸೆದರು. ಮಂದಿರದ ಮುಖ್ಯ ಗುರುಗಳಾದ ಶ್ರೀ ಶಂಕರಾಚಾರ್ಯರು ದಕ್ಷಿಣ ಕನ್ನಡದ ಕಾರ್ಕಳದಲ್ಲಿ ಆಶ್ರಯ ಪಡೆದರು. ಇಂಥ ಸನ್ನಿವೇಶದಲ್ಲಿ ವಿಗ್ರಹ ಭಂಜಕ ರಾಜನೊಬ್ಬನ ಪ್ರತಿಕ್ರಿಯೆ ಹೇಗಿರುತ್ತಿತ್ತು ಮತ್ತು ಹೇಗಿರಬೇಕಿತ್ತು? ಟಿಪ್ಪು ಹೇಗೆ ಪ್ರತಿಕ್ರಿಯಿಸಿದ? ಆತ ಶಾರದಾ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಿದನಲ್ಲದೇ ಮೂರ್ತಿಗೆ ಹೊದಿಸಲು ಬೆಲೆಬಾಳುವ ವಸ್ತ್ರ ಮತ್ತು ಶಂಕರಾಚಾರ್ಯರಿಗೆ ಒಂದು ಜೋಡಿ ಶಾಲುಗಳನ್ನು ರವಾನಿಸಿದ. ಮಂದಿರದ ಮೇಲೆ ಮುಂದೆ ನಡೆಯಬಹುದಾದ ಸಂಭಾವ್ಯ ದಾಳಿಯನ್ನು ತಡೆಯುವುದಕ್ಕಾಗಿ ಸೇನೆಯ ಒಂದು ತುಕಡಿಯನ್ನು ಕಾವಲು ನಿಲ್ಲಿಸಿದ. ಆ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರಿಗೆ ಟಿಪ್ಪು ಬರೆದ ಪತ್ರವನ್ನು ಮೈಸೂರಿನ ಪುರಾತತ್ವ ಇಲಾಖೆಯ ನಿರ್ದೇಶಕ ರಾದ ರಾವ್ ಬಹಾದ್ದೂರ್ ನರಸಿಂಹಾಚಾರ್ಯರು 1916ರಲ್ಲಿ ಶಾರದಾ ಮಂದಿರದಲ್ಲಿ ಪತ್ತೆ ಹಚ್ಚಿದರು.

ಅಷ್ಟಕ್ಕೂ, ಟಿಪ್ಪುವಿಗೂ ಹಿಂದೂ ಮಂದಿರಕ್ಕೂ ನಡುವಿನ ಸಂಬಂಧ ಕೇವಲ ಶಾರದಾ ಮಠಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ನಂಜನಗೂಡು ತಾಲೂಕಿನ ಲಕ್ಷ್ಮಿಕಾಂತ್ ಮಂದಿರ ಮತ್ತು ಶ್ರೀ ಕಣ್ವೇಶ್ವರ ಮಂದಿರ, ಮೇಲುಕೋಟೆಯ ನಾರಾಯಣ ಸ್ವಾಮಿ ಮಂದಿರ, ಶ್ರೀರಂಗಪಟ್ಟಣದ ಶ್ರೀ ರಂಗನಾಥ ಮಂದಿರಕ್ಕೂ ಆತ ಸಂದರ್ಭಾನುಸಾರ ನೆರವು ನೀಡಿದ್ದಾನೆ, ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾನೆ. ಕೇರಳದ ಮಲಬಾರನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಯೋಧರು ಅಲ್ಲಿನ ಮಂದಿರವೊಂದಕ್ಕೆ ಹಾನಿ ಮಾಡಿದರು. ಟಿಪ್ಪು ಆ ಯೋಧರನ್ನು ಶಿಕ್ಷಿಸಿದ. ಮಂದಿರವನ್ನು ದುರಸ್ತಿಗೊಳಿಸಿದ. 1780 ರಲ್ಲಿ ಟಿಪ್ಪುವಿನ ತಂದೆ ಹೈದರಲಿಯು ಕಾಂಜಿವರಂನಲ್ಲಿ ಮಂದಿರವೊಂದಕ್ಕೆ ಅಡಿಪಾಯ ಹಾಕಿದ್ದ. 1791ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿಪ್ಪು ಆ ಮಂದಿರವನ್ನು ಪೂರ್ಣಗೊಳಿಸುವುದಕ್ಕಾಗಿ ವ್ಯವಸ್ಥೆ ಮಾಡಿದ. ಅಂದಹಾಗೆ, ಕಲ್ಲಿಕೋಟೆಯ ವೆಂಕಟೇಶ್ವರ ಮಂದಿರಕ್ಕೆ 195 ಹೆಕ್ಟೇರು ಜವಿೂನು ಕೊಟ್ಟದ್ದು ಟಿಪ್ಪುವೇ. ಪೊನ್ನಾನಿಯ ಗುರುವಾಯೂರ್ ಮಂದಿರಕ್ಕೆ 504 ಹೆಕ್ಟೇರು ಜವಿೂನು, ಮಾನೂರು ಮಂದಿರಕ್ಕೆ 73 ಹೆಕ್ಟೇರು, ನಂಬೂದಿರಿ ಪಾಡ್ ಮಂದಿರಕ್ಕೆ 135 ಹೆಕ್ಟೇರು ಜವಿೂನು.. ಮಂಜೂರು ಮಾಡಿರುವುದೂ ಟಿಪ್ಪುವೇ. ಇವೆಲ್ಲ ಟಿಪ್ಪು ವಿರೋಧಿಗಳಿಗೆ ಗೊತ್ತಿಲ್ಲ ಎಂದಲ್ಲ. ಅವರು ಉದ್ದೇಶ ಪೂರ್ವಕವಾಗಿ ಈ ಸತ್ಯವನ್ನು ಅಡಗಿಸುತ್ತಿದ್ದಾರೆ.

ಒಂದು ವೇಳೆ, ಟಿಪ್ಪು ದೇಗುಲ ಭಂಜಕನೇ ಆಗಿರುತ್ತಿದ್ದರೆ ಇವತ್ತು ನಮ್ಮ ನಡುವೆ ಇರುವ ಐತಿಹಾಸಿಕ ಮತ್ತು ಪುರಾತನ ದೇಗುಲಗಳ ಪರಿಸ್ಥಿತಿ ಹೇಗಿರುತ್ತಿತ್ತು? ಶ್ರೀರಂಗಪಟ್ಟಣದಲ್ಲಿ ಶ್ರೀ ರಂಗನಾಥನ ದೇಗುಲ ಅಸ್ತಿತ್ವದಲ್ಲಿ ಇರುತ್ತಿತ್ತೇ? ಮೇಲುಕೋಟೆಯಲ್ಲಿ ಚೆಲುವರಾಯ ದೇಗುಲ, ಬೇಲೂರು-ಹಳೆಬೀಡು ಏನಾಗಿರುತ್ತಿತ್ತು? ತನ್ನ ಅರಮನೆಯ ಕೇವಲ ನೂರು ಗಜಗಳ ಅಂತರದಲ್ಲಿದ್ದ ನರಸಿಂಹ ಮತ್ತು ಗಂಗಾಧರ ಮಂದಿರಗಳ ಪರಿಸ್ಥಿತಿ ಏನಾಗಿರುತ್ತಿತ್ತು? ಅಲ್ಲಿಂದ ನಿತ್ಯವೂ ಕೇಳಿ ಬರುತ್ತಿರುವ ಘಂಟೆಯ ನಿನಾದಕ್ಕೆ ಆತ ಏನೆಂದು ಪ್ರತಿಕ್ರಿಯಿಸಬೇಕಿತ್ತು? ಅಷ್ಟಕ್ಕೂ, ಟಿಪ್ಪುವನ್ನು ಹಿಂದೂ ವಿರೋಧಿ, ಮತಾಂಧ.. ಎಂದೆಲ್ಲಾ ಟೀಕಿಸುತ್ತಿರುವವರು ತಮ್ಮ ವಾದಕ್ಕೆ ಆಧಾರವಾಗಿ ನೆಚ್ಚಿಕೊಂಡಿರುವುದಾದರೂ ಯಾರನ್ನು? ವೆಲ್ಲಿಕ್ಸ್, ಕಿರ್ಕ್ ಪ್ಯಾಟ್ರಿಕ್, ಲಿಯೋನ್ ಬೋರಿಂಗ್ ಮುಂತಾದವರನ್ನೇ ಅಲ್ಲವೇ? ಇವರೆಲ್ಲ ಯಾರು? ಇವರ ಹಿನ್ನೆಲೆಯೇನು? ಇವರು ತಮ್ಮ ಗ್ರಂಥದಲ್ಲಿ ಟಿಪ್ಪುವನ್ನು ಮತಾಂಧನಾಗಿ ಚಿತ್ರಿಸಿರುವುದು ನಿಜ.

ಆದರೆ, ಇವರಿಗೂ ಬ್ರಿಟಿಷರಿಗೂ ನಡುವೆ ಇರುವ ಸಂಬಂಧವನ್ನೇಕೆ ಯಾರೂ ವಿಶ್ಲೇಷಿಸುತ್ತಿಲ್ಲ? ಭಾರತದಲ್ಲಿ ಬ್ರಿಟಿಷರನ್ನು ಮೊತ್ತಮೊದಲು ಅತ್ಯಂತ ಪ್ರಬಲವಾಗಿ ತನ್ನ ಜೀವನದ ಕೊನೆಯ ತನಕ ಎದುರಿಸಿದವನು ಟಿಪ್ಪು. ಆಂಗ್ಲರಿಗೆ ಸಹಾಯ ಮಾಡದಂತೆ ಮರಾಠರು ಮತ್ತು ನಿಝಾಮರಿಗೆ ತಾನು ಅಧಿಕಾರಕ್ಕೇರಿದ ಕೂಡಲೇ ಪತ್ರ ಬರೆದ. ಕಾಶ್ಮೀರ, ಜೋಧ್‍ಪುರ, ಜೈಪುರ ಮತ್ತು ನೇಪಾಳ ಇತ್ಯಾದಿ ಪ್ರದೇಶಗಳಲ್ಲಿದ್ದ ಹಿಂದೂ ರಾಜರೊಂದಿಗೂ ಆಂಗ್ಲ ವಿರೋಧಿ ಹೋರಾಟದಲ್ಲಿ ಒಗ್ಗೂಡುವಂತೆ ವಿನಂತಿಸಿದ್ದ. ಬ್ರಿಟಿಷರ ವಿರೋಧಿಯಾಗಿದ್ದ ಫ್ರೆಂಚರೊಂದಿಗೆ ಸಹಾಯ ಯಾಚಿಸಿದ್ದ. ಟರ್ಕಿಯ ಸುಲ್ತಾನರಿಂದ ನೆರವು ಕೋರಿದ್ದ. ಇರಾನ್ ಮತ್ತು ಅಫಘಾನಿಸ್ತಾನಗಳಿಗೆ ರಾಯಭಾರಿಗಳನ್ನು ಕಳುಹಿಸಿದ್ದ. ಆದರೆ ಆಂಗ್ಲರ ಸಾಮಂತರಂತಿದ್ದ ಟರ್ಕಿಯ ಸುಲ್ತಾನರು ನೆರವು ನೀಡಲು ನಿರಾಕರಿಸಿದ್ದಷ್ಟೇ ಅಲ್ಲ, ಆಂಗ್ಲರೊಂದಿಗೆ ರಾಜಿ ಮಾಡಿಕೊಂಡು ಫ್ರೆಂಚರಿಂದ ದೂರ ನಿಲ್ಲುವಂತೆ ಸೂಚಿಸಿದರು. ಅಂದಹಾಗೆ, ದೇಶದ ಸುಮಾರು 540 ಪ್ರಾಂತ್ಯಗಳ ರಾಜರುಗಳು ಬ್ರಿಟಿಷರ ಕೈಗೊಂಬೆಗಳಾಗಿ ಕಪ್ಪ ಒಪ್ಪಿಸುತ್ತಿದ್ದ ಸಂದರ್ಭದಲ್ಲಿ ಟಿಪ್ಪು ಇಂಥದ್ದೊಂದು ಪ್ರತಿರೋಧವನ್ನು ಹುಟ್ಟುಹಾಕಿದ್ದ ಅನ್ನುವುದನ್ನೊಮ್ಮೆ ಕಲ್ಪಿಸಿಕೊಳ್ಳಿ? ಟಿಪ್ಪು ಸಾವಿಗೀಡಾದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಾರಂಭಕ್ಕಿಂತ ಮೊದಲು ಬ್ರಿಟಿಷರು ಒಂದು ಸಂಧಾನದ ನಾಟಕ ನಡೆಸಿದ್ದರು.

ಕರಾರು ಪತ್ರದ ಕರಡು ಪ್ರತಿಯನ್ನು ಟಿಪ್ಪುವಿಗೆ ಕಳುಹಿಸಿಕೊಟ್ಟು ಈ ಒಪ್ಪಂದಕ್ಕೆ ಒಪ್ಪಿದರೆ ಯುದ್ಧ ಇಲ್ಲ ಎಂದು ತಿಳಿಸಿದ್ದರು. ಅದರಲ್ಲಿ, ‘ಟಿಪ್ಪು ತನ್ನ ಸೇನೆಯಲ್ಲಿರುವ ಫ್ರೆಂಚ್ ಯೋಧರು ಮತ್ತು ನೌಕರರನ್ನು ಉಚ್ಛಾಟಿಸಬೇಕು’ ಎಂಬುದೂ ಸೇರಿತ್ತು. ಅಲ್ಲದೇ, ಟಿಪ್ಪುವಿನ ಆಪ್ತ ಮಿತ್ರರೂ ಇದೇ ಸಲಹೆಯನ್ನು ನೀಡಿದ್ದರು. ಆದರೆ ಟಿಪ್ಪು ಒಪ್ಪಿಕೊಳ್ಳಲಿಲ್ಲ. ಹೀಗೆ ತಮ್ಮ ಶರತ್ತನ್ನು ಒಪ್ಪಿಕೊಳ್ಳದಿದ್ದುದನ್ನೇ ನೆಪ ಮಾಡಿಕೊಂಡು ಬ್ರಿಟಿಷರು ಟಿಪ್ಪುವಿನ ವಿರುದ್ಧ ಯುದ್ಧ ಸಾರಿ ಅಂತಿಮವಾಗಿ ಹತ್ಯೆಗೈದರು. ಒಂದು ರೀತಿಯಲ್ಲಿ, ಅಧಿಕಾರ ವಹಿಸಿದಂದಿನಿಂದ ಮರಣವಪ್ಪುವ ವರೆಗೆ ಟಿಪ್ಪು ಬ್ರಿಟಿಷ್ ವಿರೋಧಿಯಾಗಿಯೇ ಬದುಕಿದ. ಈ ದಾರಿಯಲ್ಲಿ ತನ್ನಿಬ್ಬರು ಮಕ್ಕಳನ್ನು ಒತ್ತೆಯಿಟ್ಟ. ವೆಲ್ಲಿಕ್ಸ್, ಕಿರ್ಕ್ ಪ್ಯಾಟ್ರಿಕ್, ಲಿಯೋನ್ ಬೋರಿಂಗ್‍ರ ಗ್ರಂಥವನ್ನು ಎತ್ತಿಕೊಂಡು ಟಿಪ್ಪುವನ್ನು ಮತಾಂಧ ಎಂದು ಕರೆಯುವವರಿಗೆ ಈ ಇತಿಹಾಸ ಗೊತ್ತಿಲ್ಲವೇ? ಬ್ರಿಟಿಷರನ್ನು ವೈರಿಯೆಂದು ಪರಿಗಣಿಸಿದ ಮತ್ತು ಜೀವನಪೂರ್ತಿ ಆ ವೈರಿಯನ್ನು ಎದುರಿಸಿದ ವ್ಯಕ್ತಿಯ ಇತಿಹಾಸವನ್ನು ತಿಳಿಯುವುದಕ್ಕೆ ಆ ವೈರಿ ರಾಷ್ಟ್ರದ ಮಂದಿ ಬರೆದ ಗ್ರಂಥಗಳೇ ಆಧಾರವಾಗಬೇಕೇ? ಜಗತ್ತಿನಲ್ಲಿ ಟಿಪ್ಪುವಿನ ಹೊರತು ಇನ್ನಾರ ಇತಿಹಾಸವನ್ನು ನಾವು ಈ ರೀತಿಯಲ್ಲಿ ಅಭ್ಯಸಿಸಿದ್ದೇವೆ? ನಿಜವಾಗಿ, ಟಿಪ್ಪುವಿನ ಇತಿಹಾಸವನ್ನು ಬ್ರಿಟಿಷರು ಹೇಳುವುದೇ ಒಂದು ಪರಮ ಜೋಕು.

ಸದ್ಯ ಈ ದೇಶದಲ್ಲಿ ಈ ಜೋಕನ್ನೇ ಪರಮ ಸತ್ಯ ಎಂದು ಒಂದು ಗುಂಪು ಪ್ರಚಾರ ಮಾಡುತ್ತಿದೆ. ಈ ಪ್ರಚಾರದ ಅಬ್ಬರ ಎಷ್ಟು ಜೋರಾಗಿದೆಯೆಂದರೆ ಆತ ತನ್ನ ಆಡಳಿತಾವಧಿಯಲ್ಲಿ ಬರೇ ಮಸೀದಿಗಳನ್ನು ಕಟ್ಟಿ, ಮತಾಂತರ ಕೇಂದ್ರಗಳನ್ನು ತೆರೆದಿದ್ದನೇನೋ ಎಂದೇ ಭಾವಿಸಬೇಕಾಗುತ್ತದೆ. ಅಷ್ಟಕ್ಕೂ, ಆತ ಕಟ್ಟಿರುವ ಮಸೀದಿಗಳಾದರೂ ಎಷ್ಟಿವೆ ಮತ್ತು ಎಲ್ಲಿವೆ? ಕೊಡಗು ನಗರವೊಂದರಲ್ಲೇ ಆತ 70 ಸಾವಿರ ಹಿಂದೂಗಳನ್ನು ಮತಾಂತರಿಸಿದ್ದಾನೆ ಎಂದು ಆರೋಪಿಸುವಾಗ, ಆ ಕಾಲದಲ್ಲಿ ಕೊಡಗು ನಗರ ಬಿಡಿ ಇಡೀ ಕೊಡಗಿನಲ್ಲಿಯೇ 25 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿರುವುದಕ್ಕೆ ಸಾಧ್ಯವಿರಲಿಲ್ಲ ಎಂಬುದನ್ನೇಕೆ ಇವರು ಅಡಗಿಸುತ್ತಿದ್ದಾರೆ? ಹೈದರಲಿಯ ಕಾಲದಲ್ಲಿಯೇ ಕೊಡಗು ಶ್ರೀರಂಗಪಟ್ಟಣದ ವಶವಾಗಿತ್ತು. ಮಾತ್ರವಲ್ಲ, ವಾರ್ಷಿಕ 2 ಸಾವಿರ ಕಪ್ಪ ಕಾಣಿಕೆ ನೀಡಬೇಕೆಂಬ ಶರತ್ತಿನ ಮೇರೆಗೆ ಕೊಡಗನ್ನು ಅಲ್ಲಿನ ರಾಜನಿಗೇ ಆತ ವಹಿಸಿಕೊಟ್ಟಿದ್ದ. ಆ ಬಳಿಕ ಕೊಡಗು ಶ್ರೀರಂಗಪಟ್ಟಣದ ಅಧೀನದಲ್ಲಿಯೇ ಮುಂದುವರಿಯಿತು. ಆದರೆ ಕೊಡಗಿನಲ್ಲಿ ಆಗಾಗ ಬಂಡಾಯ ಏಳುತ್ತಲೇ ಇತ್ತು. 1784ರಲ್ಲಿ ಮನ್‍ಮಿತ್ ರಾಯ್‍ನ ನೇತೃತ್ವದಲ್ಲಿ ಕೊಡಗಿನ ಜನರು ಮತ್ತೊಮ್ಮೆ ಟಿಪ್ಪುವಿನ ವಿರುದ್ಧ ದಂಗೆಯೆದ್ದರು. ಅವನಿಗೆ ರಂಗಾನಾಯರ್ ಎಂಬ ಪ್ರಮುಖನ ಬೆಂಬಲವೂ ಇತ್ತು. ಆಗ ಟಿಪ್ಪು ಕೊಡಗಿನ ಮೇಲೆ ಯುದ್ಧ ಸಾರಿದ ಹಾಗೂ ರಾಯ್ ಮತ್ತು ನಾಯರ್‍ನ ಸಹಿತ ಸಾವಿರಾರು ಮಂದಿಯನ್ನು ಬಂಧಿಸಿ ಶ್ರೀರಂಗಪಟ್ಟಣಕ್ಕೆ ರವಾನಿಸಿದ.

ಪದೇ ಪದೇ ಏಳುತ್ತಿದ್ದ ದಂಗೆಯನ್ನು ದಮನಿಸುವುದಕ್ಕೆ ರಾಜನೊಬ್ಬ ಕೈಗೊಂಡ ಕ್ರಮ ಇದಾಗಿತ್ತೇ ಹೊರತು ಇದನ್ನೇ ಬಲಾತ್ಕಾರದ ಮತಾಂತರ ಎಂದು ಸಾರಿ ಬಿಡುವುದು ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ. ಇದೇ ರೀತಿಯಲ್ಲಿ ಆತ ಕ್ರೈಸ್ತರ ವಿರುದ್ಧವೂ ಕ್ರಮ ಕೈಗೊಂಡಿದ್ದ. 1782ರ ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮಂಗಳೂರಿನ ಕ್ರೈಸ್ತರು ಗುಪ್ತವಾಗಿ ಆಂಗ್ಲರಿಗೆ ನೆರವಾಗಿದ್ದರು. ಬಿಜನೂರನ್ನು ವಶಪಡಿಸುವುದಕ್ಕೆ ಕರ್ನಲ್ ಮ್ಯಾಥ್ಯೂಸ್‍ನಿಗೆ ಸಹಕರಿಸಿದ್ದರು. ಪಶ್ಚಿಮ ಕರಾವಳಿಯಿಂದ ಅನೇಕ ಕ್ರೈಸ್ತರು ಪಲಾಯನಗೈದು ಬ್ರಿಟಿಷರೊಡನೆ ಸೇರಿ ಕೊಂಡಿದ್ದರು. ಮಂಗಳೂರಿನ ಮೇಲೆ ಜನರಲ್ ಕ್ಯಾಂಬೆಲ್ ಆಕ್ರಮಣ ನಡೆಸಿದ ಸಂದರ್ಭದಲ್ಲಿ ಬ್ರಿಟಿಷರಿಗೆ ಒಂದು ಸಾವಿರ ಮೂಟೆ ಅಕ್ಕಿಯನ್ನು ಕ್ರೈಸ್ತರು ಸರಬರಾಜು ಮಾಡಿದ್ದರು. ಕ್ರೈಸ್ತರನ್ನು ಟಿಪ್ಪು ಶಿಕ್ಷಿಸಿದ್ದು ಈ ದ್ರೋಹಕ್ಕಾಗಿ. ಈ ಷಡ್ಯಂತ್ರದಲ್ಲಿ ಭಾಗಿಯಾದ ಹೆಚ್ಚಿನವರನ್ನು ಕೊಚ್ಚಿನ್, ಗೋವಾ, ಶ್ರೀರಂಗ ಪಟ್ಟಣಗಳಿಗೆ ಗಡೀಪಾರು ಮಾಡಲಾಯಿತು.

ಅಷ್ಟಕ್ಕೂ, ತನ್ನ ಅಧೀನದಲ್ಲಿರುವ ಪ್ರಜೆಗಳು ವೈರಿಯನ್ನು ಬೆಂಬಲಿಸಿದರೆ ಯಾವ ರಾಜ ತಾನೇ ಅದನ್ನು ಸಹಿಸಬಲ್ಲ? ಹಾಗಂತ, ಕ್ರೈಸ್ತ ಕೈದಿಗಳಿಗೆ ಆರಾಧನಾ ಕರ್ಮಗಳನ್ನು ನೆರವೇರಿಸಲು ಪಾದ್ರಿಗಳನ್ನು ಕಳುಹಿಸಿಕೊಡುವಂತೆ ಗೋವಾದ ವೈಸ್‍ರಾಯ್‍ಗೆ ಪತ್ರ ಬರೆದಿದ್ದೂ ಟಿಪ್ಪುವೇ. ಹಾನಿಗೀಡಾಗಿದ್ದ ಚರ್ಚ್‍ಗಳನ್ನು ದುರಸ್ತಿ ಪಡಿಸಿದ್ದೂ ಆತನೇ. ಕೊಡಗು ಮತ್ತು ಕರಾವಳಿ ಪ್ರದೇಶದಲ್ಲಿ ದಲಿತ, ಕೊರಗ ಮುಂತಾದ ಹಿಂದುಳಿದ ಜಾತಿಯ ಮಹಿಳೆಯರಿಗೆ ಸೊಂಟದಿಂದ ಮೇಲೆ ಬಟ್ಟೆ ಧರಿಸುವುದಕ್ಕೆ ಸಾಮಾಜಿಕವಾಗಿ ಒಂದು ಬಗೆಯ ಬಹಿಷ್ಕಾರವಿತ್ತು. ಜನಾಂಗೀಯ ಪಕ್ಷಪಾತ ಮತ್ತು ಅಸ್ಪೃಶ್ಯತೆಗಳು ದೊಡ್ಡ ಮಟ್ಟದಲ್ಲಿ ಆಚರಣೆಯಲ್ಲಿದ್ದುವು. ಮೇಲ್ವರ್ಗದ ಎದುರು ಕೆಳವರ್ಗದವರು ಸಂಪೂರ್ಣ ಬಟ್ಟೆ ಧರಿಸುವುದನ್ನು ಅಗೌರವ ಎಂದೇ ಪರಿಗಣಿಸಲಾಗುತ್ತಿತ್ತು. ಈ ಅನಾಗರಿಕ ಪದ್ಧತಿಯನ್ನು ನಿಷೇಧಿಸಿದವನೇ ಟಿಪ್ಪು. ಟಿಪ್ಪುವಿನ ಆಗಮನದ ಬಳಿಕವೇ ಈ ಭಾಗದ ದಮನಿತ ಮಹಿಳೆಯರು ರವಿಕೆ ತೊಡಲು ಆರಂಭಿಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ. ಟಿಪ್ಪು ಕ್ರೈಸ್ತರನ್ನೋ ಕೊಡವರನ್ನೋ ಅವರ ಧರ್ಮದ ಕಾರಣಕ್ಕಾಗಿ ಬಂಧಿಸಿಲ್ಲ ಅಥವಾ ಗಡೀಪಾರುಗೊಳಿಸಿಲ್ಲ ಎಂಬುದು ಆ ಇಡೀ ಬೆಳವಣಿಗೆಯ ಹಿನ್ನೆಲೆಯನ್ನು ಪರಿಶೀಲಿಸಿದರೆ ಸ್ಪಷ್ಟವಾಗುತ್ತದೆ.

ಅಂದಹಾಗೆ, ಭಾರತದ ಮೇಲೆ ಯುದ್ಧ ಸಾರಿದ ಪಾಕಿಸ್ತಾನವನ್ನು ಭಾರತೀಯರು ಬೆಂಬಲಿಸಿದರೆ, ಅವರನ್ನು ಇಲ್ಲಿನ ಸರಕಾರ ಏನೆಂದು ಪರಿಗಣಿಸಬಹುದು? ಹೇಗೆ ನಡೆಸಿಕೊಳ್ಳಬಹುದು? ಅಲ್ಲದೆ,ಈ ಮಣ್ಣಿಗೆ ತೀರ ಹೊಚ್ಚ ಹೊಸತಾದ ಸುಧಾರಣಾ ಕ್ರಮಗಳನ್ನೂ ಟಿಪ್ಪು ಕೈಗೊಂಡಿದ್ದ . ರೇಷ್ಮೆ ಬೆಳೆಯನ್ನು ಈ ಮಣ್ಣಿಗೆ ಮೊಟ್ಟಮೊದಲು ಪರಿಚಯಿಸಿದ್ದು ಆತನೇ. ಕೋಲಾರದಲ್ಲಿ ಮತ್ತು ಇನ್ನಿತರ ಕಡೆ ಲಕ್ಷಾಂತರ ಮಂದಿ ಇವತ್ತು ಅದನ್ನು ಆಶ್ರಯಿಸಿದ್ದಾರೆ. ಜಮೀನ್ದಾರರಿಂದ ಭೂಮಿಯನ್ನು ಕಿತ್ತು ಬಡ ದಲಿತ, ದುರ್ಬಲರಾದ ರೈತರಿಗೆ ಕೊಟ್ಟದ್ದೂ ಟಿಪ್ಪುವೇ. ಈ  ಮಣ್ಣಿನ  ಮಟ್ಟಿಗೆ ಅದು ಮೊತ್ತ ಮೊದಲ ಭೂ ಸುಧಾರಣೆಯಾಗಿತ್ತು. ಆ ಬಳಿಕ ಇದೇ ಭೂ ಸುಧಾರಣೆಯನ್ನು ನಾಲ್ವಡಿ ಕೃಷ್ಣರಾಜ ಅರಸರು ಮತ್ತು ಆ ಬಳಿಕ ದೇವರಾಜ ಅರಸರು  ಮುಂದುವರಿಸಿದರು. ಕನ್ನಂಬಾಡಿ ಅಣೆಕಟ್ಟಿಗೆ 1794 ರಲ್ಲಿ ಶಂಕುಸ್ಥಾಪನೆ ನಡೆಸಿದ್ದೂ ಆತನೇ. ಪಾಳು ಬಿದ್ದ ಭೂಮಿಯನ್ನು  ಕೃಷಿ ಮಾಡಲು ಬಿಟ್ಟು ಕೊಡುತ್ತಿದ್ದ ಟಿಪ್ಪು, ಬಡ್ಡಿ ರಹಿತವಾಗಿ ಕೃಷಿಕರಿಗೆ  ಸಾಲ ನೀಡುತ್ತಿದ್ದ. ಆತ ಮಧ್ಯ, ಜೂಜು,ವೇಶ್ಯಾವಾಟಿಕೆಯನ್ನು ನಿಷೇಧಿಸಿದ್ದ. ಆದರೆ ಟಿಪ್ಪುವನ್ನು ಮತಾಂಧ, ಕ್ರೂರಿ ಎಂದೆಲ್ಲ ಕರೆಯುವವರು  ಆತನ ಈ ಯಾವ ಸುಧಾರಣಾ ನೀತಿಯನ್ನು ಪ್ರಸ್ತಾಪಿಸುತ್ತಲೇ ಇಲ್ಲ. ಹಾಗಂತ,
ಟಿಪ್ಪು ಸುಲ್ತಾನ್‍ನನ್ನು ನಾವು ಓರ್ವ ರಾಜನಾಗಿ ನೋಡಬೇಕೇ ಹೊರತು ಹಿಂದೂವಾಗಿಯೋ ಮುಸ್ಲಿಮನಾಗಿಯೋ ಖಂಡಿತ ಅಲ್ಲ. ಆತನನ್ನು ಮುಸ್ಲಿಮ್ ರಾಜ ಎಂದು ವರ್ಗೀಕರಿಸಬೇಕಾದ ಅಗತ್ಯವೂ ಇಲ್ಲ. ಇತರೆಲ್ಲ ರಾಜರುಗಳಲ್ಲಿರುವ ದೌರ್ಬಲ್ಯಗಳು ಆತನಲ್ಲಿಯೂ ಇದ್ದುವು. ಮೂರು ಮದುವೆಯಾಗಿದ್ದ. ಅರಮನೆಯಲ್ಲಿ ನೂರಾರು ಸೇವಕರಿದ್ದರು. ಆತನಲ್ಲಿ ಮಿತಿವಿೂರಿದ ಮೃದು ಧೋರಣೆಯಿತ್ತು ಮತ್ತು ಅಗತ್ಯಕ್ಕಿಂತ ಹೆಚ್ಚು ತನ್ನವರ ಮೇಲೆ ನಂಬಿಕೆ ಇರಿಸುತ್ತಿದ್ದ. ಸೇನಾ ವ್ಯೂಹ ರಚನೆಯಲ್ಲಿ ಸಾಕಷ್ಟು ದೌರ್ಬಲ್ಯಗಳಿದ್ದುವು. ಕೆಡುಕುಗಳನ್ನು ನಿಷೇಧಿಸುವಲ್ಲೂ ಜಾಣತನದ ಕೊರತೆಯಿತ್ತು. ಆತನ ವಿರುದ್ಧ ಪದೇ ಪದೇ ಬಂಡಾಯದ ಧ್ವನಿ ಏಳುತ್ತಿದ್ದುದು, ಒಳಸಂಚುಗಳು ನಡೆಯುತ್ತಿದ್ದುದು ಮತ್ತು ಆ ಒಳಸಂಚಿನಿಂದಾಗಿಯೇ ಆತ ಪರಾಜಿತನಾದದ್ದು ಎಲ್ಲವೂ ಇವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಬಹುಶಃ, ಟಿಪ್ಪು ಸುಲ್ತಾನನನ್ನು ವೈಭವೀಕರಿಸುವವರು ಮತ್ತು ತೀರಾ ಮತಾಂಧನಂತೆ ಚಿತ್ರೀಕರಿಸುವವರಿಬ್ಬರೂ ಟಿಪ್ಪುವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ವಿಫಲರಾಗಿದ್ದಾರೆಂದೇ ಹೇಳ ಬೇಕಾಗುತ್ತದೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಬುದ್ಧನಿಂದ ಅಂಗುಲಿಮಾಲನವರೆಗೆ

ಮುಂದಿನ ಸುದ್ದಿ »

ಚೇತನ್ ಭಗತ್ ಎಂಬ ಲೇಖಕನೂ, ಅಡುಗೆ ಮನೆಯ ಗಂಡಸರೂ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×