Saturday September 23 2017

Follow on us:

Contact Us

ರಾಜಕಾರಣಿಗಳು ಬಯಸುವ ಭಾರತ-ಪಾಕಿಸ್ತಾನ…

ಭಾರತದ ರಾಜಕಾರಣಿಗಳು ಪಾಕಿಸ್ತಾನವನ್ನು ಪ್ರೀತಿಸುವಷ್ಟು ಬಹುಶಃ ಭಾರತೀಯರನ್ನೇ ಪ್ರೀತಿಸಲಾರರೇನೋ ಅನಿಸುತ್ತದೆ. ರಾಜಕಾರಣಿಗಳಿಗೆ ಅದರಲ್ಲೂ ಮುಖ್ಯವಾಗಿ ಆಡಳಿತ ಪಕ್ಷಕ್ಕೆ ಯಾವಾಗಲೂ ವೈರಿ ರಾಷ್ಟ್ರವೊಂದು ಕಡ್ಡಾಯವಾಗಿ ಇರಬೇಕಾಗುತ್ತದೆ. ಇದು ಭಾರತದ ರಾಜಕಾರಣಿಗಳ ಅಗತ್ಯ ಮಾತ್ರ ಅಲ್ಲ. ಜಾಗತಿಕ ರಾಷ್ಟ್ರಗಳ ಅಗತ್ಯವೂ ಹೌದು. ಅಮೇರಿಕವು ರಷ್ಯವನ್ನು ಮತ್ತು ರಷ್ಯವು ಅಮೇರಿಕವನ್ನು ಒಂದು ಕಾಲದಲ್ಲಿ ಹೇಗೆ ವೈರಿ ರಾಷ್ಟ್ರವಾಗಿ ಬಿಂಬಿಸುತ್ತಾ ತಂತಮ್ಮ ರಾಷ್ಟ್ರಗಳ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿದುವೋ ಮತ್ತ ಗದ್ದುಗೆಯನ್ನು ಉಳಿಸಿಕೊಳ್ಳುವುದಕ್ಕೆ ಹೇಗೆ ಈ ಹಗೆ ಭಾವವನ್ನು ಬಳಸಿಕೊಂಡವೋ ಅದರ ಅತ್ಯಂತ ನವೀನ ಮಾದರಿಯಾಗಿ ಭಾರತ ಮತ್ತು ಪಾಕಿಸ್ತಾನಗಳಿವೆ. ಭಾರತದ ಪಕ್ಕ ಪಾಕಿಸ್ತಾನ ಇರಬೇಕು ಅಥವಾ ಪಾಕಿಸ್ತಾನದ ಪಕ್ಕ ಭಾರತ ಇರಬೇಕು ಎಂಬುದನ್ನು ತೀರ್ಮಾನಿಸಿದ್ದು ಈ ಎರಡೂ ರಾಷ್ಟ್ರಗಳ ನಾಗರಿಕರೋ ಅಥವಾ ರಾಜಕಾರಣಿಗಳೋ ಅಲ್ಲ. ಅದು ಪ್ರಕೃತಿಯ ಕೊಡುಗೆ.

ಆದರೆ, ಭಾರತ ಮತ್ತು ಪಾಕಿಸ್ತಾನಗಳು ಅಕ್ಕ-ಪಕ್ಕ ಸದಾ ಇರಲಿ ಎಂದು ಈ ಎರಡೂ ದೇಶಗಳ ರಾಜಕಾರಣಿಗಳು ಇವತ್ತು ಬಯಸುತ್ತಿರುವ ಸಾಧ್ಯತೆ ಖಂಡಿತ ಇದೆ. ಅವರು ಈ ನೆರೆ-ಹೊರೆಯನ್ನು ಮನಸಾರೆ ಆನಂದಿಸುತ್ತಿದ್ದಾರೆ. ಅವರ ಎಲ್ಲ ವೈಫಲ್ಯಗಳನ್ನು ತಕ್ಷಣಕ್ಕೆ ಸರಿಸಿ ಬಿಡುವ ಸಾಮಥ್ರ್ಯ ಈ ನೆರೆಹೊರೆಗಿದೆ. ಪಾಕಿಸ್ತಾನಕ್ಕೆ ಭಾರತದಲ್ಲಿ ಎಷ್ಟು ಬೆಂಬಲಿಗರಿದ್ದಾರೆ ಎಂಬುದನ್ನು 2014ರ ಲೋಕಸಭಾ ಚುನಾವಣೆ ಬಹಳ ದೊಡ್ಡ ಮಟ್ಟದಲ್ಲಿ ಸಾಬೀತುಪಡಿಸಿತು. ನರೇಂದ್ರ ಮೋದಿಯವರು ಬಹುತೇಕ ಪ್ರತಿ ಚುನಾವಣಾ ಸಭೆಯಲ್ಲೂ ಪಾಕಿಸ್ತಾನವನ್ನು ಪ್ರಸ್ತಾಪಿಸಿದರು. ಪ್ರಧಾನಿ ಮನ್‍ಮೋಹನ್ ಸಿಂಗ್‍ರ ವಿದೇಶಾಂಗ ನೀತಿಯನ್ನು ಅಣಕಿಸಿದರು. ಲವ್ ಲೆಟರ್ ವಿದೇಶ ನೀತಿ ಎಂದು ಟೀಕಿಸಿದರು. ಗಡಿಯಲ್ಲಿ ಉರುಳುವ ಭಾರತದ ಓರ್ವ ಯೋಧನ ತಲೆಗೆ ಪಾಕಿಸ್ತಾನದ 10 ಯೋಧರ ತಲೆಯನ್ನು ತರುವ ಅದ್ಭುತ ಯೋಜನೆಯನ್ನು ಅವರ ಪಕ್ಷ ಮತದಾರರ ಮುಂದಿಟ್ಟಿತು.

ದಾವೂದ್ ಇಬ್ರಾಹೀಮ್‍ನನ್ನು ಭಾರತಕ್ಕೆ ಕರೆತರುವ ಭರವಸೆ ನೀಡಲಾಯಿತು. ಬಹುಶಃ ಬಿಜೆಪಿ ಕೊಡುತ್ತಿದ್ದ ಭರವಸೆಗಳನ್ನು ನಂಬುವುದಾದರೆ ಅದು ಅಧಿಕಾರಕ್ಕೆ ಬಂದ ತಕ್ಷಣ ಪಾಕ್‍ನ ವಿರುದ್ಧ ಯುದ್ಧ ಸಾರಿ ಬಿಡುತ್ತದೇನೋ ಎಂದೇ ಅಂದುಕೊಳ್ಳಬೇಕಿತ್ತು. ದುರಂತ ಏನೆಂದರೆ, ಚುನಾವಣೆಯ ಸಮಯದಲ್ಲಿ ಪಾಕ್‍ನ ನೆರಳನ್ನೂ ದ್ವೇಷಿಸುವ ರೀತಿಯಲ್ಲಿ ಮಾತಾಡುತ್ತಿದ್ದ ಬಿಜೆಪಿಯು ಗೆದ್ದ ಬಳಿಕ ಪಾಕ್ ಪ್ರಧಾನಿಯನ್ನೇ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿತು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರೇ ಗುಟ್ಟಾಗಿ ಪಾಕಿಸ್ತಾನಕ್ಕೆ ತೆರಳಿ ಪ್ರಧಾನಿ ನವಾಝ್ ಶರೀಫ್‍ರ ಖಾಸಗಿ ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರ ತಾಯಿಗೆ ಉಡುಗೊರೆಯನ್ನು ಕಳುಹಿಸಿದರು. ಹಾಗಂತ, ಈ ಎಲ್ಲ ಸಂದರ್ಭಗಳಲ್ಲಿ ಪಾಕಿಸ್ತಾನ ಬದಲಾಗಿತ್ತು ಎಂದಲ್ಲ. ಮನ್‍ಮೋಹನ್ ಸಿಂಗ್‍ರ ಕಾಲದಲ್ಲಿದ್ದ ಗಡಿ ಹಾಗೆಯೇ ಇತ್ತು. ಗಡಿಯಲ್ಲಿ ಯೋಧರ ಸಾವು, ಘರ್ಷಣೆ, ಒಳನುಸುಳುವಿಕೆಗಳೆಲ್ಲ ನಡೆಯುತ್ತಲೇ ಇದ್ದುವು. ಆದರೂ ನರೇಂದ್ರ ಮೋದಿ ನೇತೃತ್ವದ ಈ ಮೂರು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಿರೀಕ್ಷಿತ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ.

ಕಾಶ್ಮೀರ ಈ ಹಿಂದೆಂದಿಗಿಂತಲೂ ಹೆಚ್ಚು ಇವತ್ತು ಉದ್ವಿಗ್ನ ಸ್ಥಿತಿಯಲ್ಲಿದೆ. ನೂರಕ್ಕಿಂತಲೂ ಅಧಿಕ ದಿನಗಳ ವರೆಗೆ ಕಾಶ್ಮೀರಿಗಳು ಪ್ರತಿಭಟನೆ ನಡೆಸಿದಂತಹ ಅಭೂತಪೂರ್ವ ಬೆಳವಣಿಗೆಯೂ ನಡೆಯಿತು. ಆದರೆ ಗಡಿಯಲ್ಲಿ ಮಾಮೂಲಾಗಿರುವ ಮತ್ತು ಎಲ್ಲ ಆಡಳಿತಗಳ ಕಾಲದಲ್ಲೂ ನಡೆದಿರುವ ಪ್ರತಿದಾಳಿಯನ್ನೇ ಸರ್ಜಿಕಲ್ ಸ್ಟ್ರೈಕ್ ಎಂಬ ಹೆಸರಲ್ಲಿ ವೈಭವೀಕರಿಸಿ ಹೇಳುವ ಪ್ರಯತ್ನ ಮಾಡಿದ್ದನ್ನು ಬಿಟ್ಟರೆ ಮೋದಿಯವರು ಪಾಕ್‍ನ ವಿರುದ್ಧ ಇನ್ನಾವ ಬಿಗು ಕ್ರಮವನ್ನೂ ಕೈಗೊಂಡಿಲ್ಲ. ಅದರ ಬದಲು ಮನ್‍ಮೋಹನ್ ಸಿಂಗ್ ಸರಕಾರಕ್ಕಿಂತ ತುಸು ಹೆಚ್ಚೇ ಅದು ಪಾಕ್ ಪ್ರೇಮಿ ನೀತಿಯನ್ನು ತಳೆದಿದೆ ಅನ್ನುವುದನ್ನು ಕಳೆದವಾರ ಕೇಂದ್ರ ಸರಕಾರದ ಗೃಹ ಇಲಾಖೆ ಬಿಡುಗಡೆಗೊಳಿಸಿದ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ. 2012-13ರಲ್ಲಿ ಮನ್‍ಮೋಹನ್ ಸಿಂಗ್ ಸರಕಾರವು ಪಾಕ್ ನಾಗರಿಕರಿಗಾಗಿ 1,32,590 ವಿಸಾಗಳನ್ನು ಮಂಜೂರು ಮಾಡಿತ್ತು.

ಆದರೆ ನರೇಂದ್ರ ಮೋದಿ ಸರಕಾರವು 2015-16ರ ಅವಧಿಯಲ್ಲಿ 1,72,536 ವಿಸಾಗಳನ್ನು ಮಂಜೂರು ಮಾಡಿದೆ. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಮನ್‍ಮೋಹನ್ ಸಿಂಗ್ ಸರಕಾರವು 2011ರಲ್ಲಿ 48,640 ವಿಸಾಗಳನ್ನು, 2012ರಲ್ಲಿ 59,846 ಮತ್ತು 2013ರಲ್ಲಿ 72,744 ವಿಸಾಗಳನ್ನು ಮಂಜೂರು ಮಾಡಿದ್ದರೆ ಮೋದಿ ಸರಕಾರವು 2014ರಲ್ಲಿ 94,993 ಮತ್ತು 2015ರಲ್ಲಿ 72,543 ವಿಸಾಗಳನ್ನು ಮಂಜೂರು ಮಾಡಿದೆ. ಅಲ್ಲದೇ 2016ರಲ್ಲಿ 1,04,720 ಮಂದಿ ಪಾಕ್ ನಾಗರಿಕರು ಭಾರತಕ್ಕೆ ಭೇಟಿ ನೀಡಿರುವರು ಎಂಬ ವರದಿಯೂ ಇದೆ. ಒಂದು ಕಡೆ ಪಾಕಿಸ್ತಾನವನ್ನು ತೆಗಳುತ್ತಾ ಮತ್ತು ಪಾಕ್ ನಾಗರಿಕರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಲೇ ಇನ್ನೊಂದು ಕಡೆ ಪಾಕಿಸ್ತಾನಿಯರನ್ನು ಭಾರತಕ್ಕೆ ಸ್ವಾಗತಿಸುವಲ್ಲಿ ಮನ್‍ಮೋಹನ್ ಸಿಂಗ್ ಸರಕಾರಕ್ಕಿಂತಲೂ ಹೆಚ್ಚು ಉತ್ಸಾಹ ತೋರುತ್ತಿರುವುದಕ್ಕೆ ಏನೆನ್ನಬೇಕು; ದ್ವಂದ್ವ, ಕಾಪಟ್ಯ, ಮೋಸ, ದಗಲ್ಬಾಜಿ.. ಎಂದರೆ ಸಾಕೇ? ತಮಾಷೆ ಏನೆಂದರೆ, ಪಾಕ್ ನಾಗರಿಕರಿಗೆ ಭಾರೀ ಸಂಖ್ಯೆಯಲ್ಲಿ ವಿಸಾ ಮಂಜೂರು ಮಾಡಿರುವ ಮಾಹಿತಿ ಬಿಡುಗಡೆಗೊಂಡ ದಿನವೇ ಕೇಂದ್ರದ ಸಾಮಾಜಿಕ ನ್ಯಾಯ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠವಳೆ ಅವರ ಹೇಳಿಕೆಯೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ‘ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವ ಸಮಯ ಬಂದಿದೆ..’ ಎಂದವರು ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ಎದುರಿಸಿದ್ದೇ  ಯುದ್ಧದ ಭಾಷೆಯನ್ನು ಬಳಸಿ. ಆದರೆ ಕಳೆದ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಆ ಭಾಷೆಗೆ ತದ್ವಿರುದ್ಧವಾಗಿ ಅದು ನಡೆದುಕೊಂಡಿದೆ. ಎಲ್ಲಿಯ ವರೆಗೆಂದರೆ, ವಿಸಾ ಮಂಜೂರಾತಿಯಲ್ಲೂ ಅದು ಮನ್‍ಮೋಹನ್ ಸಿಂಗ್ ಸರಕಾರವನ್ನು ಹಿಂದಿಕ್ಕಿದೆ. ಹೀಗಿರುತ್ತಾ, ಯುದ್ಧ ಸನ್ನಿಹಿತವಾಗಿದೆ ಅಂದರೆ ಏನರ್ಥ? ಇದು ಯಾರನ್ನು ಮೋಸಗೊಳಿಸುವ ಹೇಳಿಕೆ? ಈ ಹೇಳಿಕೆಯ ಅಗತ್ಯ ಈಗ ಏನಿತ್ತು? ಮೋದಿಯವರು ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳ ಕುರಿತಂತೆ ಜನರು ನಿರಾಶರಾಗುತ್ತಿದ್ದಾರೆ ಎಂಬುದರ ಸೂಚನೆಯೇ ಈ ಹೇಳಿಕೆ? ಕಪ್ಪು ಹಣ ಮರಳಿ ಭಾರತಕ್ಕೆ ತರುವ ಭರವಸೆ, ನೋಟು ಅಮಾನ್ಯೀಕರಣದ ಸಮಯದಲ್ಲಿ ನೀಡಿದ ಭರವಸೆ, ಜಿಎಸ್‍ಟಿ ನೀತಿಗಳು ಬಿಜೆಪಿಯನ್ನು ನಂಬಿಕೆಗನರ್ಹ ಪಕ್ಪವಾಗಿ ಪರಿವರ್ತಿಸುತ್ತಿದೆ ಅನ್ನುವುದನ್ನು ಈ ಹೇಳಿಕೆ ಬಿಂಬಿಸುತ್ತಿದೆಯೇ?

ಆ ಕಾರಣದಿಂದಲೇ ಚರ್ಚೆಯಲ್ಲೇ ಇಲ್ಲದ ಪಾಕಿಸ್ತಾನವನ್ನು ಅಠವಳೆ ಚರ್ಚೆಗೆ ಎಳೆದು ತಂದರೇ? ಬೆಲೆಯೇರಿಕೆಯ ಕುರಿತು ಜನರು ಚರ್ಚಿಸುತ್ತಿರುವ ಈ ಹೊತ್ತಿನಲ್ಲಿ ‘ಪಾಕ್‍ನ ವಿರುದ್ಧ ಯುದ್ಧ’ ಎಂಬ ಹಳೆ ಡಯಲಾಗನ್ನು ಮರು ಉಚ್ಚರಿಸಿದುದರ ಹಿಂದೆ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಇದೆಯೇ? ಮುಂದಿನ ದಿನಗಳಲ್ಲಿ ಇನ್ನಷ್ಟು ಸಚಿವರು ಪಾಕ್ ಕೇಂದ್ರಿತ ಹೇಳಿಕೆಗಳನ್ನು ನೀಡುವರೇ? ‘ಗಡಿ ಉದ್ವಿಗ್ನ’ಗೊಂಡ ಒಂದಷ್ಟು ಸುದ್ದಿಗಳು ಮತ್ತೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬಹುದೇ?ಅಂದಹಾಗೆ, ಪಾಕಿಸ್ತಾನವು ಭಾರತದ ಶತ್ರುವಲ್ಲ ಅಥವಾ ಭಾರತವು ಪಾಕಿಸ್ತಾನದ ಶತ್ರುವೂ ಅಲ್ಲ. ನಿಜವಾದ ಶತ್ರುಗಳು ಎರಡೂ ದೇಶಗಳಲ್ಲಿರುವ ರಾಜಕಾರಣಿಗಳು. ಶತ್ರುತ್ವದ ಭಾಷೆಯಲ್ಲಿ ಮಾತಾಡುವ ರಾಜಕಾರಣಿಗಳನ್ನು ಮನೆಗಟ್ಟುವುದೇ ಇದಕ್ಕಿರುವ ಸೂಕ್ತ ಪರಿಹಾರ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಗೌರಿಯನ್ನು ಕೊಂದ ವಾದ ಯಾವುದು?

ಮುಂದಿನ ಸುದ್ದಿ »

ಪ್ರಧಾನಿಯವರೇ… ದಯವಿಟ್ಟು ವಾಸ್ತವಕ್ಕೆ ಮುಖಾಮುಖಿಯಾಗಿ

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×