Wednesday September 13 2017

Follow on us:

Contact Us

ಆ ಮಗುವನ್ನು ಎದುರಿಟ್ಟುಕೊಂಡು…

ಸುಶ್ಮಿತಾ ಆಚಾರ್ಯ ಎಂಬ 11 ವರ್ಷದ ಮಗು ದೊಡ್ಡಪ್ಪನ ಬೈಕಲ್ಲಿ ಕೂರುತ್ತದೆ. ಕಂಸಾಳೆ ನೃತ್ಯಪಟುವಾಗಿದ್ದ ಮಗುವಿಗೆ ಅಪ್ಪನ ಸೈಟು ನೋಡುವ ಆಸೆ. ಬಸ್ಸು ನಿಲ್ಲುತ್ತದೆ. ಹಿಂಬದಿಯಲ್ಲಿ ಸಾಗುತ್ತಿದ್ದ ಬೈಕೂ ನಿಲ್ಲುತ್ತದೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆಯುತ್ತದೆ. ಬಸ್ಸು ಮತ್ತು ಲಾರಿಯ ನಡುವೆ ಸಿಲುಕಿಕೊಂಡ ಬೈಕ್‍ನಿಂದ ಮಗು ರಸ್ತೆಗೆ ಬೀಳುತ್ತದೆ. ಲಾರಿ ಮಗುವಿನ ಮೇಲೆ ಚಲಿಸುತ್ತದೆ.. ಮುಂದಿನದನ್ನು ಹೇಳಬೇಕಿಲ್ಲ. ಮಗು ಮೃತಪಡುತ್ತದೆ.

ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಕಳೆದವಾರ ಸಂಭವಿಸಿದ ಈ ಘಟನೆಯಿಂದ ಸುಶ್ಮಿತಾ, ಉಡುಪಿ ಮತ್ತು ಕಟಪಾಡಿ ಎಂಬ ನಾಮಪದಗಳನ್ನು ಕಳಚಿದರೆ, ಈ ಸುದ್ದಿ ಕರ್ನಾಟಕದ್ದಷ್ಟೇ ಆಗಿ ಉಳಿಯಲ್ಲ, ಇದು ತಮಿಳ್ನಾಡಿನದ್ದೂ ಆದೀತು, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನದ್ದೂ ಆದೀತು. ಅಪಘಾತಗಳು ಈ ದೇಶದಲ್ಲಿ ಅಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಕಳೆದವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು 2016ರಲ್ಲಿ ಸಂಭವಿಸಿದ ಅಪಘಾತ ಮತ್ತು ಸಾವು-ನೋವುಗಳ ವಿವರವನ್ನು ದೇಶದ ಮುಂದಿಟ್ಟರು. ಈ ವಿವರಗಳು ಎಷ್ಟು ಭಯಾನಕವಾಗಿವೆಯೆಂದರೆ, ದೇಶದ ರಸ್ತೆಗಳನ್ನೆಲ್ಲ ಶಾಶ್ವತವಾಗಿ ಮುಚ್ಚಿಬಿಟ್ಟು ಕಾಲುದಾರಿಯನ್ನು ಆರಂಭಿಸಿ ಬಿಟ್ಟರೆ ಹೇಗೆ ಎಂದು ಚಿಂತಿಸುವಂತಾಗಿದೆ. 2016ರಲ್ಲಿ ಒಟ್ಟು 4.81 ಲಕ್ಷ ಅಪಘಾತ ಪ್ರಕರಣಗಳು ನಡೆದಿವೆ. ಇದು ಅಧಿಕೃತ ಪ್ರಕರಣಗಳು ಮಾತ್ರ. ಪೊಲೀಸ್ ಠಾಣೆಯನ್ನು ಹತ್ತದ ಸಣ್ಣ-ಪುಟ್ಟ ಅಪಘಾತ ಪ್ರಕರಣಗಳು ಈ ಲೆಕ್ಕದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಒಟ್ಟು 1.51 ಲಕ್ಷ ಮಂದಿ ಅಪಘಾತಗಳಿಂದಾಗಿ ಸಾವಿಗೀಡಾಗಿದ್ದಾರೆ.

ಅಪಘಾತಗಳಲ್ಲಿ ಭಾಗಿಯಾದ ಹೆಚ್ಚಿನ ಚಾಲಕರ ವಯಸ್ಸು 25ರಿಂದ 35 ವರ್ಷಗಳ ಒಳಗೆ. ಸಾವಿಗೀಡಾದವರಲ್ಲಿ 85% ಮಂದಿಯ ವಯಸ್ಸು 18ರಿಂದ 60 ವರ್ಷದೊಳಗೆ. 18ರಿಂದ 60 ಎಂಬ ವಯಸ್ಸು ಯಾವುದೇ ದೇಶದ ಪಾಲಿಗೆ ಅತೀ ಮಹತ್ವದ ವಯಸ್ಸು. ಅದು ದುಡಿಯುವ ವಯಸ್ಸು. ಕೌಶಲ್ಯವನ್ನು ಅಭಿವೃದ್ಧಿಪಡಿಸುವ ವಯಸ್ಸು. ದೇಶದ ಸಂಪನ್ಮೂಲವಾಗಬಹುದಾದ ವಯಸ್ಸು. ದುರಂತ ಏನೆಂದರೆ, ಅಪಘಾತಗಳಲ್ಲಿ ಸಾವಿಗೀಡಾದ ಹೆಚ್ಚಿನವರ ವಯಸ್ಸು 18 ರಿಂದ 60 ಎಂದು ಮಾತ್ರವಲ್ಲ, ಅಪರಾಧಿಗಳಾಗಿ ಜೈಲು ಸೇರಿದವರಲ್ಲಿ ಹೆಚ್ಚಿನವರು 25 ರಿಂದ 35 ವಯಸ್ಸಿನ ಒಳಗಿನವರು ಎಂಬುದು. ದ್ವಿಚಕ್ರ ವಾಹನವನ್ನು ಬಳಸುವುದು ಬಹುತೇಕ ಯುವ ಸಮೂಹ. ಅಪಘಾತಗಳಲ್ಲಿ ಸಿಂಹಪಾಲನ್ನು ಈ ದ್ವಿಚಕ್ರಗಳೇ ಹೊತ್ತುಕೊಂಡಿವೆ- 34.8%. 2015ಕ್ಕೆ ಹೋಲಿಸಿದರೆ 2016ರಲ್ಲಿ ಸಾವಿಗೀಡಾದವರ ಸಂಖ್ಯೆ 3% ಹೆಚ್ಚಿದೆ. ಒಟ್ಟು ಅಪಘಾತ ಪ್ರಕರಣಗಳಲ್ಲಿ ಶೇ. 84 ರಷ್ಟು ಅಪಘಾತಗಳಿಗೆ ಚಾಲಕರ ಮಿತಿ ಮೀರಿದ ವೇಗವೇ ಕಾರಣ ಎಂದೂ `Road Accidents in India -2016’ ಎಂಬ ಶೀರ್ಷಿಕೆಯಲ್ಲಿ ಗಡ್ಕರಿಯವರು ಬಿಡುಗಡೆಗೊಳಿಸಿದ ವರದಿಯಲ್ಲಿದೆ. ಇದನ್ನು ಹೇಗೆ ಜೀರ್ಣಿಸಿಕೊಳ್ಳುವುದು?

ಭಾರತದ ರಸ್ತೆಗಳನ್ನು ಜೈಶ್ ಮುಹಮ್ಮದ್, ಇಂಡಿಯನ್ ಮುಜಾಹಿದೀನ್, ಮಾವೋವಾದಿ ನಕ್ಸಲ್ ಮುಂತಾದ ನಿಷೇಧಿತ ಭಯೋತ್ಪಾದಕ ಗುಂಪುಗಳೇನೂ ನಿರ್ವಹಿಸುತ್ತಿಲ್ಲ. ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರ ಹೆದ್ದಾರಿ ಎಂದು ವಿಭಜಿಸಿ ಒಟ್ಟು ರಸ್ತೆಗಳ ನಿರ್ವಹಣೆ ಮಾಡುತ್ತಿರುವುದು ನಮ್ಮ ಸರಕಾರಗಳೇ. ಒಂದುವೇಳೆ, ರಸ್ತೆಯಲ್ಲಿ ಹುದುಗಿಸಿಟ್ಟಿರುವ ಬಾಂಬ್‍ಗಳು ಸ್ಫೋಟಗೊಂಡು ಅಪಘಾತಗಳಾಗುತ್ತಿವೆ ಎಂದಾಗಿದ್ದರೆ ಭಯೋತ್ಪಾದನಾ ತಂಡಗಳ ತಲೆಗೆ ಕಟ್ಟಿಯಾದರೂ ಈ ಸಾವುಗಳ ಹೊಣೆಯಿಂದ ಸರಕಾರಗಳಿಗೆ ತಪ್ಪಿಸಿಕೊಳ್ಳಬಹುದಿತ್ತು. ಆದರೆ ನಮ್ಮ ರಸ್ತೆಗಳೆಂದೂ ಹಾಗೆ ಸಿಡಿದಿಲ್ಲ. ಯಾವ ಸವಾರನ ಮೇಲೂ ಅದು ದಾಳಿ ಮಾಡಿಲ್ಲ. ಹೀಗಿರುವಾಗ ಒಂದೂವರೆ ಲಕ್ಷದಷ್ಟು ಮಂದಿಯನ್ನು ಬರೇ ಒಂದೇ ವರ್ಷದಲ್ಲಿ ಸಾಯಿಸಿದ ಹೊಣೆಯನ್ನು ಯಾರು ಹೊರಬೇಕು? 25ರಿಂದ 35 ವರ್ಷದೊಳಗಿನ ಚಾಲಕರೇ, ಸಾವಿಗೀಡಾದವರೇ, ವಾಹನಗಳೇ? ಒಂದು ಕಡೆ ಬಯಲುಮುಕ್ತ ಶೌಚಾಲಯಕ್ಕಾಗಿ ಸರಕಾರದ ವತಿಯಿಂದ ಗಂಭೀರ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.

ಜನರ ಆರೋಗ್ಯವೇ ಇದರ ಪ್ರಧಾನ ಗುರಿ. ಇನ್ನೊಂದು ಕಡೆ ಸ್ವಚ್ಛ ಭಾರತ ಅಭಿಯಾನಗಳೂ ನಡೆಯುತ್ತಿವೆ. ಇದರ ಗುರಿಯೂ ಆರೋಗ್ಯಪೂರ್ಣ ಪರಿಸರವೇ. ಜನರ ಆರೋಗ್ಯಕ್ಕಾಗಿ ಮತ್ತು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ವರ್ಷಂಪ್ರತಿ ನಮ್ಮ ಸರಕಾರಗಳು ಕೋಟ್ಯಾಂತರ ರೂಪಾಯಿಯನ್ನು ವ್ಯಯ ಮಾಡುತ್ತಿವೆ. ಗಂಗಾನದಿಯನ್ನು ಸ್ವಚ್ಛಗೊಳಸುವುದು ಕೂಡ ಈ ಅಭಿಯಾನದ ಒಂದು ಭಾಗ. ಗಂಗೆ ಮಲಿನವಾಗುವುದೆಂದರೆ, ಆ ನದಿಯ ತಟದಲ್ಲಿರುವ ಲಕ್ಷಾಂತರ ಕುಟುಂಬಗಳ ಆರೋಗ್ಯ ಮಲಿನವಾಗುವುದು ಎಂದರ್ಥ. ಜನರ ಆರೋಗ್ಯಕ್ಕಾಗಿ ಇಷ್ಟೆಲ್ಲ ಕಷ್ಟಪಟ್ಟು ಸರಕಾರಗಳು ಹಣ ವ್ಯಯಿಸುತ್ತಿರುವಾಗ ಇನ್ನೊಂದು ಕಡೆ ಇದೇ ಆರೋಗ್ಯವಂತ ಮತ್ತು ಬಹುಮುಖ್ಯವಾಗಿ ಯುವಸಮೂಹ ರಸ್ತೆಯಲ್ಲಿ ಹೆಣವಾಗುವುದನ್ನು ಏನೆಂದು ಕರೆಯಬೇಕು? ಆರೋಗ್ಯವಂತರಾದ ಮಂದಿ ಪ್ರತಿದಿನ ಅಪಘಾತಕ್ಕೆ ಸಿಲುಕಿ ದೇಶದ ಸಂಪನ್ಮೂಲ ಪಟ್ಟಿಯಿಂದ ಹೊರಬೀಳುತ್ತಿರುವುದಕ್ಕೆ ಏನು ಪರಿಹಾರವಿದೆ?

ಇದಕ್ಕೆ ಬಾಯಿಬಾರದ ರಸ್ತೆಗಳನ್ನು ದೂರಿ ಯಾವ ಪ್ರಯೋಜನವೂ ಇಲ್ಲ. ಇಂಥ ರಸ್ತೆಗಳನ್ನು ನಿರ್ಮಿಸಿದವರು, ರಸ್ತೆ ಸಾರಿಗೆ ಅಧಿಕಾರಿಗಳು, ರಸ್ತೆ ಸುರಕ್ಷಿತಾ ನಿಯಮಗಳನ್ನು ಉಲ್ಲಂಘಿಸಿದ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳದವರು, ಅಧಿಕಾರಶಾಹಿಗಳು, ಭ್ರಷ್ಟತನ, ಲಂಚಗುಳಿತನ, ವ್ಯವಸ್ಥೆಯ ಬೇಜವಾಬ್ದಾರಿತನ.. ಎಲ್ಲವೂ ಈ ಸಾವುಗಳ ಹೊಣೆಯನ್ನು ಹೊತ್ತುಕೊಳ್ಳಬೇಕು. ಈ ಸಾವುಗಳನ್ನು ಈ ಎಲ್ಲರೂ ಸೇರಿಕೊಂಡು ನಡೆಸಿರುವ ಹತ್ಯೆಯೆಂದೇ ನಾವು ಪರಿಗಣಿಸಬೇಕು. ಅಂದಹಾಗೆ, ಅಪಘಾತಗಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ ಎಂಬುದರ ಅರ್ಥ- ಈಗ ನಡೆಯುತ್ತಿರುವ ಅಪಘಾತಗಳೆಲ್ಲ ತಪ್ಪಿಸಲಸಾಧ್ಯವಾದುದು ಎಂದಲ್ಲ. ವಾಹನಗಳಿಂದ ತೆರಿಗೆಯ ರೂಪದಲ್ಲಿ ಅಪಾರ ಪ್ರಮಾಣದಲ್ಲಿ ದುಡ್ಡು ಸಂಗ್ರಹಿಸುವ ಸರಕಾರಗಳು ಆ ಹಣದಿಂದ ಸಮರ್ಪಕ ರಸ್ತೆ ನಿರ್ಮಾಣಕ್ಕಾಗಿ ವ್ಯಯ ಮಾಡುವ ಮೊತ್ತವೆಷ್ಟು ಎಂಬುದು ಮೊದಲಾಗಿ ಬಹಿರಂಗಕ್ಕೆ ಬರಬೇಕು. ರಸ್ತೆ ತೆರಿಗೆಯ ಮೊದಲ ಹಕ್ಕುದಾರ ರಸ್ತೆಗಳೇ. ಸುರಕ್ಷಿತ ಮತ್ತು ಸಂಚಾರಯೋಗ್ಯ ರಸ್ತೆಗಳ ನಿರ್ಮಾಣದ ಹೊಣೆಯನ್ನು ಸಂಪೂರ್ಣವಾಗಿ ಸರಕಾರಗಳೇ ಹೊತ್ತುಕೊಳ್ಳಬೇಕು.

ಅಪಘಾತದ ಮೂಲಕ ಆಗುವ ಪ್ರತಿ ಸಾವಿಗೂ ಸರಕಾರ ನಡೆಸುವ ಹತ್ಯೆಯೆಂಬಷ್ಟು ಗಂಭೀರವಾಗಿ ಸಮಾಜ ಪ್ರತಿಕ್ರಿಯಿಸಬೇಕು. ಸುರಕ್ಷಿತ ರಸ್ತೆ ನಿರ್ಮಾಣದಲ್ಲಿ ವ್ಯವಸ್ಥೆ ಅಸಡ್ಡೆ ತೋರಿದರೆ ಜನರು ತೆರಿಗೆ ಪಾವತಿಯನ್ನು ತಡೆ ಹಿಡಿಯಬೇಕು. ‘ತೆರಿಗೆ ತಡೆ’ ಚಳವಳಿ ಎಲ್ಲೆಡೆಯೂ ಕಾಣಿಸಿಕೊಳ್ಳಬೇಕು. ಪ್ರತಿವರ್ಷ ಒಂದೂವರೆ ಲಕ್ಷದಷ್ಟು ಮಂದಿ ರಸ್ತೆಯಲ್ಲಿ ಹೆಣವಾಗುತ್ತಿರುವುದನ್ನು ಸಹಜ ಸಾವಾಗಿ ಪರಿಗಣಿಸಲು ಖಂಡಿತ ಸಾಧ್ಯವಿಲ್ಲ. ಎಲ್ಲೆಲ್ಲ ಲೋಪ ಸಂಭವಿಸಿದೆಯೋ ಅಲ್ಲೆಲ್ಲ ಲೋಪ ತಿದ್ದುವ ತುರ್ತು ಕ್ರಮಗಳನ್ನು ಸರಕಾರಗಳು ಕೈಗೊಳ್ಳಬೇಕು. ಇನ್ನಷ್ಟು ಸುಶ್ಮಿತಾರು ನಮ್ಮನ್ನು ಮೌನವಾಗಿಸುವ ಮೊದಲು ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ಸಾರಿಗೆ ಸಚಿವರನ್ನೇ ಜನರು ‘ಭಯೋತ್ಪಾದಕ’ ಎಂದು ಕರೆದು ಕೇಸು ದಾಖಲಿಸಿಯಾರು.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ವೃದ್ಧಾಶ್ರಮವೇ ಪರಿಹಾರ ಎಂದಾಗುವ ಮೊದಲು…

ಮುಂದಿನ ಸುದ್ದಿ »

ಗೌರಿಯನ್ನು ಕೊಂದ ವಾದ ಯಾವುದು?

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×