Thursday August 10 2017

Follow on us:

Contact Us

ಇರೋಮ್ ಶರ್ಮಿಳಾ ಮದುವೆ ಮತ್ತು ಮೇಧಾ ಪಾಟ್ಕರ್ ಉಪವಾಸ

ಇರೋಮ್ ಶರ್ಮಿಳಾ ಮತ್ತು ಮೇಧಾ ಪಾಟ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇವರಲ್ಲಿ ಇರೋಮ್ ಶರ್ಮಿಳಾ ಸದ್ಯ ಕೊಡೈಕನಾಲ್‍ನಲ್ಲಿ ಮದುವೆ ತಯಾರಿಯಲ್ಲಿ ಬ್ಯುಝಿಯಾಗಿದ್ದಾರೆ. ಮೇಧಾ ಪಾಟ್ಕರ್ ಅವರು ಮಧ್ಯ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ. ವಿಷಾದ ಏನೆಂದರೆ, ಬಹುತೇಕ ಕನ್ನಡ ಪತ್ರಿಕೆಗಳು (ಸತ್ಯಾಗ್ರಹದ 15 ದಿನಗಳ ವರೆಗೆ.) ಮೇಧಾರ ಸತ್ಯಾಗ್ರಹದ ಸುದ್ದಿಯನ್ನು ಪ್ರಕಟಿಸಿಯೇ ಇಲ್ಲ. ಅದೇ ವೇಳೆ, ರಾಷ್ಟ್ರಮಟ್ಟದ ಇಂಗ್ಲಿಷ್ ಪತ್ರಿಕೆಗಳು ಈ ಸತ್ಯಾಗ್ರಹಕ್ಕೆ ಒಳಪುಟದಲ್ಲಿ ಒಂದು ಕಾಲಂನಷ್ಟು ಜಾಗವನ್ನಷ್ಟೇ ಕೊಟ್ಟಿವೆ. ಇದಕ್ಕೆ ಹೋಲಿಸಿದರೆ ಇರೋಮ್ ಭಾಗ್ಯಶಾಲಿ. ಆಕೆ ಕೊಡೈಕನಾಲ್‍ನಲ್ಲಿ ತಂಗಿರುವುದು, ಬ್ರಿಟಿಷ್ ಪೌರತ್ವ ಪಡೆದಿರುವ ಡೆಸ್ಮಾಂಡ್ ಕುಟಿನ್ಹೊ ಜೊತೆ ಅಂತರ್ಧಮೀಯ ವಿವಾಹಕ್ಕಾಗಿ ನೋಂದಣಿ ಮಾಡಿಕೊಂಡಿರುವುದು ಮತ್ತು ಹಿಂದೂ ಮಕ್ಕಳ ಕಚ್ಚಿಯಂಥ ಸಂಘಟನೆಗಳು ಆ ಮದುವೆಗೆ ವಿರೋಧ ಸೂಚಿಸಿ ದೂರು ದಾಖಲಿಸಿರುವುದೆಲ್ಲ ಮಾಧ್ಯಮಗಳ ಪಾಲಿಗೆ ರಸವತ್ತಾದ ಸುದ್ದಿಯಾಗಿ ಮಾರ್ಪಾಟುಗೊಂಡಿದೆ.

2000 ಇಸವಿಯಲ್ಲಿ ಇರೋಮ್ ಶರ್ಮಿಳಾ ಆಮರಣಾಂತ ಉಪವಾಸವನ್ನು ಕೈಗೊಂಡು ದೇಶದಾದ್ಯಂತ ಸುದ್ದಿಯಾಗಿದ್ದರು. ಹರೆಯದ ಯುವತಿಯೊಬ್ಬಳು ಪ್ರಜಾಸತ್ತಾತ್ಮಕ ವಿಧಾನದ ಮೂಲಕ ವ್ಯವಸ್ಥೆಯನ್ನು ಎದುರಿಸುವ ನಿರ್ಧಾರ ತಳೆದುದು ಅತ್ಯಂತ ಧೈರ್ಯದ ಕೆಲಸ. ಮಣಿಪುರದ ಮೇಲೆ ಕೇಂದ್ರ ಸರಕಾರ ಹೇರಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(AFSPA )ಯನ್ನು ಹಿಂತೆಗೆಯಬೇಕು ಎಂಬುದು ಯುವತಿಯ ಬೇಡಿಕೆಯಾಗಿತ್ತು. ಆ ಯುವತಿ ಅನ್ನ, ನೀರು ತ್ಯಜಿಸಿದಳು. ಕನ್ನಡಿ ನೋಡಲ್ಲ, ತಲೆಗೂದಲು ಬಾಚಲ್ಲ ಎಂದು ಶಪಥಗೈದಳು. ಆಕೆಯ ಸಾವನ್ನು ತಪ್ಪಿಸುವುದಕ್ಕಾಗಿ ಸರಕಾರ ಆಗಾಗ ಬಂಧಿಸಿ ನಳಿಕೆಯ ಮೂಲಕ ಬಲವಂತದಿಂದ ಆಹಾರವನ್ನು ಕೊಡಲು ಪ್ರಾರಂಭಿಸಿತು. ಕ್ರಮೇಣ ಮಾಧ್ಯಮಗಳೂ ಆಕೆಯ ಸತ್ಯಾಗ್ರಹದ ಮೇಲೆ ಆಸಕ್ತಿಯನ್ನು ಕಳಕೊಳ್ಳತೊಡಗಿದುವು. ಜನರು ನಿಧಾನಕ್ಕೆ ಅವರ ಸುತ್ತಲಿನಿಂದ ಕರಗತೊಡಗಿದರು.

ಬಳಿಕ ವರ್ಷಕ್ಕೊಮ್ಮೆ ಸ್ಮರಣೆಗೆ ಒಳಗಾಗುವ ವ್ಯಕ್ತಿತ್ವವಾಗಿ ಇರೋಮ್ ಬದಲಾದರು. ಹಾಗಂತ, ಇರೋಮ್ ತನ್ನ ಶಪಥದಲ್ಲಿ ಯಾವ ರಾಜಿಯನ್ನೂ ಮಾಡಿಕೊಂಡಿರಲಿಲ್ಲ. ಮಾತ್ರವಲ್ಲ, ಮಣಿಪುರದಲ್ಲಿರುವ ಸಶಸ್ತ್ರ ಪಡೆಗಳು ಪರಮ ದಯಾಳುವಾಗಿಯೂ ಮಾರ್ಪಟ್ಟಿರಲಿಲ್ಲ. ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಮಣಿಪುರದಲ್ಲಿ 2000 ಇಸವಿಯ ಬಳಿಕವೂ ಧಾರಾಳ ನಡೆದಿದೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ನೇತೃತ್ವದಲ್ಲಿ ನಡೆದ ತನಿಖಾ ಸಮಿತಿಯು 1500 ಎನ್‍ಕೌಂಟರ್‍ಗಳ ಬಗ್ಗೆ ಶಂಕೆ ವ್ಯಕ್ತಪಡಿಸಿ ಸುಪ್ರೀಮ್ ಕೋರ್ಟ್‍ಗೆ ವರದಿಯನ್ನು ನೀಡಿದೆ. ಆ ಬಗ್ಗೆ ಸುಪ್ರೀಮ್ ಕೋರ್ಟ್ ತನಿಖೆಗೂ ಆದೇಶಿಸಿದೆ.

ಇಷ್ಟಿದ್ದೂ ಇರೋಮ್‍ರ ಹೋರಾಟವು ನಿಧಾನವಾಗಿ ಜನರ ನಿರ್ಲಕ್ಷ್ಯಕ್ಕೆ ಯಾಕೆ ಒಳಗಾಯಿತೆಂಬ ಪ್ರಶ್ನೆ ಖಂಡಿತ ಪ್ರಸ್ತುತ. ವ್ಯವಸ್ಥೆ ಅತ್ಯಂತ ಯೋಜಿತವಾಗಿ ಆಕೆಯ ವಿರುದ್ಧ ಅಪಪ್ರಚಾರದಲ್ಲಿ ತೊಡಗಿತು. ಆಕೆಯ ಹೋರಾಟ ಮಾದರಿಯನ್ನು ಅಪ್ರಸ್ತುತವೆಂದು ಸಾರಿತು. ಇರೋಮ್‍ರದ್ದು ನಕಾರಾತ್ಮಕ ಸಿದ್ಧಾಂತವೆಂದು ಪ್ರತಿಪಾದಿಸಿತು. ಮಣಿಪುರದ ಪಾಲಿಗೆ ಅಪಾಯಕಾರಿಯಾಗಿರುವ ಸಶಸ್ತ್ರ ಕಾಯ್ದೆಯನ್ನು ಹಿಂಪಡೆಯದೆಯೇ ಇರೋಮ್‍ರನ್ನೇ ಅಪಾಯಕಾರಿಯಾಗಿ ಬಿಂಬಿಸುವ ಶ್ರಮ ನಡೆಯಿತು. ಅಂತಿಮವಾಗಿ 2016ರ ಆಗಸ್ಟ್ ನಲ್ಲಿ ಇರೋಮ್ ತನ್ನ 16 ವರ್ಷಗಳ ಸತ್ಯಾಗ್ರಹಕ್ಕೆ ವಿದಾಯ ಕೋರಿದರು. ಪ್ರಜಾ (People resurgence and Justice Allaiance ) ಎಂಬ ಪಕ್ಷವನ್ನು ಕಟ್ಟಿ ರಾಜಕೀಯಕ್ಕೆ ಧುಮುಕಿದರು. ಮಣಿಪುರ ವಿಧಾನಸಭೆಗೆ ಸ್ಪರ್ಧಿಸಿದರು. ಆದರೆ ಅವರಿಗೆ ಲಭಿಸಿದ್ದು ಬರೇ 90 ಮತ. ಮಣಿಪುರದ ಜನತೆಗಾಗಿ ಅತಿ ಬೆಲೆಬಾಳುವ ಯೌವನವನ್ನೇ ಧಾರೆಯೆರೆದ ಇರೋಮ್‍ರಿಗೆ ಸಿಕ್ಕ ಪುರಸ್ಕಾರ ಇದು.

ಇರೋಮ್‍ಗೆ ಹೋಲಿಸಿದರೆ ಮೇಧಾ ಇನ್ನೂ ಹೋರಾಟದ ಕಣದಲ್ಲಿದ್ದಾರೆ. 1985ರಲ್ಲಿ ನರ್ಮದಾ ಬಚಾವೋ ಆಂದೋಲನ್ (NBA) ಅನ್ನು ಕಟ್ಟಿ ಸತತ 32 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಮೇಧಾ ಈ ಇಳಿ ವಯಸ್ಸಿನಲ್ಲೂ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿದ್ದಾರೆ. ನರ್ಮದಾ ಅಣೆಕಟ್ಟಿನ ಗೇಟ್‍ಗಳನ್ನು ಮುಚ್ಚಲು ಕೇಂದ್ರ ಸರಕಾರವು ಗುಜರಾತ್‍ಗೆ ಅನುಮತಿ ನೀಡಿರುವುದರಿಂದ ಮಧ್ಯಪ್ರದೇಶದ ನಾಲ್ಕು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶಗಳು ಮುಳುಗಲಿದ್ದು 40 ಸಾವಿರ ಕುಟುಂಬಗಳು ನಿರಾಶ್ರಿತವಾಗಲಿವೆ ಎಂಬುದು ಅವರ ಆತಂಕ. ಈ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡದೆಯೇ ಗೇಟ್ ಮುಚ್ಚುವ ಕ್ರಮ ಕೈಗೊಳ್ಳಬಾರದೆಂಬುದು ಅವರ ಆಗ್ರಹ.

ನಿಜವಾಗಿ 1985ರಲ್ಲಿ ನರ್ಮದಾ ಚಳುವಳಿಯನ್ನು ರೂಪಿಸುವಾಗ ಮೇಧಾ ಆಗಿನ್ನೂ ಯುವತಿ. ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶಗಳಿಗೆ ನೀರು ಮತ್ತು ವಿದ್ಯುತ್ ಒದಗಿಸುವ ಉದ್ದೇಶದ ಬೃಹತ್ ನರ್ಮದಾ ಅಣೆಕಣ್ಣು ಯೋಜನೆಯ ಬಗ್ಗೆ ಮೇಧಾ ಅಧ್ಯಯನಕ್ಕಿಳಿದರು. ಅದನ್ನು ಸುತ್ತಿಕೊಂಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಪ್ರಶ್ನಿಸಿದರು. ಯೋಜನೆಯಿಂದ ನಿರಾಶ್ರಿತರಾಗಲಿರುವ ಲಕ್ಷಾಂತರ ಮಂದಿಗೆ ಪುನರ್ವಸತಿ ಮತ್ತು ಪರಿಹಾರಕ್ಕಾಗಿ ಆಗ್ರಹಿಸಿದರು. ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದರು. ವಿಷಾದ ಏನೆಂದರೆ, ವ್ಯವಸ್ಥೆ ಮೇಧಾರ ದೇಶ ಬದ್ಧತೆಯನ್ನೇ ಪ್ರಶ್ನಿಸತೊಡಗಿತು. ಅಭಿವೃದ್ಧಿ ವಿರೋಧಿ ಎಂಬ ಪುಕಾರನ್ನು ಹಬ್ಬಿಸಿತು. ಅವರ ವಿರುದ್ಧ ಕೈಗೊಳ್ಳಲಾದ ನಕಾರಾತ್ಮಕ ಪ್ರಚಾರ ಯುದ್ಧವು ಎಷ್ಟು ಪ್ರಬಲವಾಗಿತ್ತೆಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಈಶಾನ್ಯ ಮುಂಬಯಿ ಕ್ಷೇತ್ರದಿಂದ ಸ್ಪರ್ಧಿಸಿದ ಮೇಧಾರನ್ನು ಮತದಾರರನ್ನು ತಿರಸ್ಕರಿಸಿದರು. ಬರೇ 8.9% ಮತಗಳೊಂದಿಗೆ ಅವರು 3ನೇ ಸ್ಥಾನಕ್ಕೆ ಕುಸಿದರು.

ಬ್ರಿಟಿಷರನ್ನು ಮಣಿಸಿದ ಗಾಂಧೀಜಿಯ ಹೋರಾಟ ಮಾದರಿಯನ್ನು ನೆಚ್ಚಿಕೊಂಡು ಹೋರಾಟಕ್ಕೆ ಧುಮುಕಿದ ಇಬ್ಬರು ಉತ್ಸಾಹಿ ಯುವತಿಯರನ್ನು ಅದೇ ಗಾಂಧೀಜಿಯ ಭಾರತವು ಅತ್ಯಂತ ವ್ಯವಸ್ಥಿತವಾಗಿ ಹತ್ತಿಕ್ಕಿದ ವಿಷಾದಕರ ಚರಿತ್ರೆ ಇದು. ಒಂದು ಕಡೆ ನಕ್ಸಲೀಯರ ಶಸ್ತ್ರಸಜ್ಜಿತ ಹೋರಾಟ ಮಾದರಿಯನ್ನು ವ್ಯವಸ್ಥೆಯು ದೇಶವಿರೋಧಿ ಪಟ್ಟಿಯಲ್ಲಿಟ್ಟು ಸೇನೆಯ ಮೂಲಕ ಹತ್ತಿಕ್ಕುತ್ತಿದ್ದರೆ ಇನ್ನೊಂದು ಕಡೆ ಅತ್ಯಂತ ಪ್ರಜಾಸತ್ತಾತ್ಮಕವಾದ ಹೋರಾಟ ಮಾದರಿಯನ್ನು ಅಪಪ್ರಚಾರ ಮತ್ತು ನಿರ್ಲP್ಷÀ್ಯ ಧೋರಣೆಯ ಮೂಲಕ ದಮನಿಸುತ್ತಿದೆ. ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳ ಮೇಲೆ ಜನರು ಭರವಸೆ ಕಳಕೊಳ್ಳುವುದಕ್ಕೆ ಪೂರಕವಾದ ವಾತಾವರಣವನ್ನು ಅದು ನಿರ್ಮಿಸುತ್ತಿದೆ. ನಿಜವಾಗಿ, ಪ್ರತಿಭಟನೆ ಎಂಬುದು ಪ್ರಜಾತಂತ್ರದ ಉಸಿರು. ವ್ಯವಸ್ಥೆಯನ್ನು ಸದಾ ಎಚ್ಚರದಲ್ಲಿಡುವ ಬಲು ದೊಡ್ಡ ಅಸ್ತ್ರ ಇದು. ಆದರೆ ಕಾರ್ಪೋರೇಟ್ ವ್ಯವಸ್ಥೆ ಈ ಪ್ರತಿಭಟನೆಗೆ ಭಯಪಡುತ್ತದೆ. ತಮ್ಮ ಯೋಜನೆಯ ದಾರಿಯಲ್ಲಿ ‘ಪ್ರತಿಭಟನೆ’ಯನ್ನು ಅದು ಹಂಪ್‍ಗಳೆಂದು ಪರಿಗಣಿಸುತ್ತದೆ.

ಹಂಪ್ ಇಲ್ಲದ ಸರಾಗ ದಾರಿ ಅದರ ಅಗತ್ಯ. ಇಂಥ ದಾರಿಯನ್ನು ಒದಗಿಸಬೇಕೆಂದರೆ ಪ್ರತಿಭಟನೆಯಲ್ಲಿ ಆಸಕ್ತಿಯನ್ನು ಕಳಕೊಂಡ ಯುವ ತಲೆಮಾರನ್ನು ತಯಾರುಗೊಳಿಸಬೇಕಾದ ಅಗತ್ಯ ಇದೆ. ಪ್ರತಿಭಟನೆಯನ್ನು ಅಭಿವೃದ್ಧಿ ವಿರೋಧಿ ಎಂದು ಮುದ್ರೆ ಒತ್ತಬೇಕೆಂದು ಕಾರ್ಪೋರೇಟ್ ಜಗತ್ತು ಬಯಸುತ್ತಿದೆ. ಅಂದಹಾಗೆ, ಹಿಂಸಾತ್ಮಕ ಪ್ರತಿಭಟನೆಯನ್ನು ಮಟ್ಟ ಹಾಕುವುದು ತುಂಬಾ ಸುಲಭ. ನಕ್ಸಲಿಸಂ ಇದಕ್ಕೆ ಅತ್ಯುತ್ತಮ ಉದಾಹರಣೆ. ಆದರೆ ಅಹಿಂಸಾತ್ಮಕ ಹೋರಾಟ ಮಾದರಿಯನ್ನು ಮಟ್ಟ ಹಾಕುವುದು ಸುಲಭ ಅಲ್ಲ. ಸದ್ಯ ವ್ಯವಸ್ಥೆ ಇದರಲ್ಲಿ ಯಶಸ್ಸು ಪಡೆಯುತ್ತಿದೆ. ಇರೋಮ್ ಮತ್ತು ಮೇಧಾ ಇದಕ್ಕೆ ಒಳ್ಳೆಯ ಉದಾಹರಣೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ದೇಶಪ್ರೇಮದ ಅಭಿಯಾನಕ್ಕೆ ಅನ್ವರ್ಥವಾಗಬಹುದೇ ಹೆರ್ನೆಯ ಮೊಲಗಳು!

ಮುಂದಿನ ಸುದ್ದಿ »

ಉಸ್ತಾದ್, ಪ್ರಿನ್ಸ್, ಜೈ, ಬಿಟ್ಟು ಹಾಗೂ….

ಸಿನೆಮಾ

  • ಸರಳವಾಗಿ ರಿಜಿಸ್ಟರ್ ಮದುವೆಯಾದ ಮುಸ್ತಫಾ-ಪ್ರಿಯಾಮಣಿ

    August 23, 2017

    ಬೆಂಗಳೂರು: ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಪ್ರಿಯಾಮಣಿ ಇಂದು ತಮ್ಮ ಹಲವು ಕಾಲದ ಗೆಳೆಯ ಮುಸ್ತಫಾರಾಜಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರ ರಿಜಿಸ್ಟರ್ ಆಫೀಸಿಗೆ ನಟಿ ...

    Read More
  • ಈ ಬಾರಿ ಗಣೇಶೋತ್ಸವ ಆಚರಿಸದ ಸಲ್ಮಾನ್ ಖಾನ್: ಕಾರಣವೇನು ಗೊತ್ತೇ?

    August 22, 2017

    ನ್ಯೂಸ್ ಕನ್ನಡ-(22.08.17): ಬಾಲಿವುಡ್ ನಟ ಸಲ್ಮಾನ್ ಖಾನ್ ಗಣಪತಿ ಭಕ್ತನಾಗಿದ್ದು, ಪ್ರತೀವರ್ಷವೂ ತಮ್ಮ ಮನೆಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಸತತ 15ವರ್ಷಗಳಿಂದ ತಮ್ಮ ಮನೆಯಲ್ಲಿ ನಡೆಸುತ್ತಾ ಬಂದಿದ್ದ ವೈಭವದ ಗಣೇಶೋತ್ಸವವನ್ನು ಕೈಬಿಟ್ಟು ಸಲ್ಮಾನ್ ಖಾನ್ ...

    Read More
  • ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದ ತಮಿಳು ನಟ ಆರ್ಯ

    August 21, 2017

    ನ್ಯೂಸ್ ಕನ್ನಡ ವರದಿ-(21.08.17): ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಯುವನಟ ಆರ್ಯ ಮಮ್ಮೂಟಿ ಅಭಿನಯದ ಗಾಡ್ ಫಾದರ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಕೇರಳದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಸೂಪರ್ ಹಿಟ್ ಚಿತ್ರವಾದ ...

    Read More
  • ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಕ್ರಿಕೆಟಿಗ ಶ್ರೀಶಾಂತ್!

    August 16, 2017

    ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್‌ ಆರೋಪಗಳಿಂದ ಕಂಗಾಲಾಗಿದ್ದ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶ್ರೀಶಾಂತ್ ಇತ್ತೀಚೆಗಷ್ಟೆ ನಿರಾಳರಾಗಿದ್ದಾರೆ. ಅವರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More
Menu
×