Friday September 15 2017

Follow on us:

Contact Us

ಗೌರಿಯನ್ನು ಕೊಂದ ವಾದ ಯಾವುದು?

ಗೌರಿ ಲಂಕೇಶ್ – ಸರ್ವ ದೌರ್ಬಲ್ಯಗಳಿಂದಲೂ ಮುಕ್ತವಾದ, ಯಾವ ವಿವಾದಗಳಿಗೂ ಒಳಗಾಗದ ಸಾಧು ಹೆಣ್ಣು ಮಗಳೇನಲ್ಲ. ಇಂಥದ್ದೊಂದು ವರ್ಚಸ್ಸನ್ನು ಅವರು ಬಯಸಿರುವ ಸಾಧ್ಯತೆಯೂ ಇಲ್ಲ. ಗಾಂಧೀಜಿಯವರ ಜೊತೆ ಅವರ ಸಮಕಾಲೀನರಾದ ಹಲವು ನಾಯಕರಿಗೆ ವೈಚಾರಿಕ ಭಿನ್ನಾಭಿಪ್ರಾಯವಿತ್ತು. ದಲಿತರಿಗೆ ಅವರು ಬಳಸಿದ ‘ಹರಿಜನ’ ಎಂಬ ಪದ ಕಾನೂನುಬಾಹಿರ ಆಗುವಷ್ಟು ಅವರು ಈ ನೆಲದಲ್ಲಿ ಪ್ರಶ್ನೆಗೆ ಒಳಗಾಗಿದ್ದಾರೆ. ಅಂಬೇಡ್ಕರ್‍ವಾದಿಗಳಿಗೆ ಅವರ ಜೊತೆ ಇವತ್ತಿಗೂ ಕೂಡ ತೀರದ ಮುನಿಸಿದೆ. ಬಲಪಂಥೀಯರಿಗೂ ಅವರ ವಿಚಾರಧಾರೆಯ ಮೇಲೆ ತಕರಾರಿದೆ. ಇವರಷ್ಟೇ ಅಲ್ಲ ಬುದ್ಧ, ಬಸವ, ನಾರಾಯಣ ಗುರು  ಎಲ್ಲರೂ ಪ್ರಶ್ನೆಗೆ ಒಳಗಾಗುತ್ತಲೇ ಈ ಮಣ್ಣಿನಲ್ಲಿ ಸ್ವೀಕೃತರಾದವರು. ಹೀಗಿರುವಾಗ, ಗೌರಿಯ ನಿಲುವು ಸರ್ವ ಮಾನ್ಯವಾಗುವುದು, ಪ್ರಶ್ನೆಗಳಿಗೆ ಆಸ್ಪದವನ್ನೇ ಒದಗಿಸದಷ್ಟು ಸಾರ್ವಕಾಲಿಕವಾಗುವುದು ಸಾಧ್ಯವೇ ಇಲ್ಲ. ಅವರು ಆಡಿರಬಹುದಾದ ಮಾತು, ಬರೆದ ಬರಹ, ತೊಡಗಿಸಿಕೊಂಡ ಚಳವಳಿ.. ಇತ್ಯಾದಿಗಳ ಕುರಿತಂತೆಅವರನ್ನು ಮೆಚ್ಚಿಕೊಳ್ಳುವವರಲ್ಲೂ ತಕರಾರು ಇರಬಹುದು. ಇರುವುದೇ ಒಳ್ಳೆಯದು. ತಕರಾರು ರಹಿತ ಬೆಂಬಲ ಎಂಬುದು ಅನೇಕ ಬಾರಿ ಅಂಧ ಅಭಿಮಾನಿಗಳಾಗಿಸಿ ಬಿಡುತ್ತದೆ.ಸದ್ಯ ನರೇಂದ್ರ ಮೋದಿಯವರು ಇಂಥದ್ದೊಂದು ಹಂತಕ್ಕೆ ತಲುಪಿ ಬಿಟ್ಟಿದ್ದಾರೆ. ಗೌರಿಯವರು ಈ ಅಪಾಯದಿಂದ ಸ್ವತಃ ತನ್ನನ್ನು ಪಾರಾಗಿಸಿಕೊಂಡಿದ್ದರು. ತನ್ನನ್ನು ಮೆಚ್ಚಿಕೊಳ್ಳುವ ಗುಂಪಿನಲ್ಲೂ ಸಾತ್ವಿಕ ತಕರಾರಿಗೆ ಜಾಗ ಮೀಸಲಿಟ್ಟಿದ್ದರು. ಇವತ್ತು ಗೌರಿಯವರ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ, ಚರ್ಚೆ, ಸಮಾಲೋಚನೆಗಳಲ್ಲಿ ಭಾಗವಹಿಸುತ್ತಿರುವವರೆಲ್ಲ ‘ನೂರು ಶೇಕಡ’ ಗೌರಿಯನ್ನು ಒಪ್ಪಿಕೊಂಡವರೇನಲ್ಲ. ಅವರು ತಮ್ಮ ಭಾಷಣ, ಬರಹದಲ್ಲಿ ಬಳಸಿದ ಕೆಲವೊಂದು ಪದಪ್ರಯೋಗಗಳನ್ನು ಮೆಚ್ಚಿ ಕೊಳ್ಳದವರೂ ಇವರಲ್ಲಿದ್ದಾರೆ. ಆದರೆ, ಗೌರಿ ಹತ್ಯೆಯ ನಂತರ ದೇಶದಾದ್ಯಂತ ಎದ್ದಿರುವ ಪ್ರತಿಭಟನೆಯ ಅಲೆ ಒಂದು ಮುಖ್ಯ ಸಂದೇಶವನ್ನು ಸಾರುತ್ತದೆ. ಅವರು ಈ ದೇಶದ ಅಗತ್ಯವಾಗಿದ್ದರು. ಅವರ ವಿಚಾರದಲ್ಲಿ ಸುಖವನ್ನು ಕಾಣುವ ಜನಸಮೂಹ ಈ ದೇಶದಲ್ಲಿತ್ತು. ಆದ್ದರಿಂದಲೇ ಅವರ ಹತ್ಯೆ ಯನ್ನು ಸೌಖ್ಯಭಾವದ ಹತ್ಯೆ ಎಂದೂ ಪರಿಗಣಿಸಬಹುದು. ಗೌರಿ ಅಸಂಖ್ಯ ಮಂದಿಗೆ ನೆಮ್ಮದಿ, ನಿರೀಕ್ಷೆ ಮತ್ತು ಧೈರ್ಯ ಆಗಿದ್ದರು.

ಅಂದಹಾಗೆ, ನಕ್ಸಲ್ ನಾಯಕನಾಗಿ ಗುರುತಿಸಿಕೊಂಡಿದ್ದ ಮತ್ತು 2005ರಲ್ಲಿ ಪೊಲೀಸ್ ಎನ್‍ಕೌಂಟರ್‍ಗೆ ಬಲಿಯಾದ ಸಾಕೇತ್ ರಾಜನ್ ಜೊತೆಗೆ ಅವರಿಗಿದ್ದ ಗೆಳೆತನವನ್ನು ನಾವು ಏಕಮುಖವಾಗಿ ಚರ್ಚಿಸಬೇಕಿಲ್ಲ. ವೈಚಾರಿಕವಾಗಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು ಅನ್ನುವುದಕ್ಕೆ ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಗೌರಿ ತೋರಿದ ಮುತುವರ್ಜಿಯೇ ಪಕ್ಕಾ ಉದಾಹರಣೆ. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಸೇರಿದಂತೆ ಒಂದು ಡಝನ್‍ನಷ್ಟು ಮಂದಿಯನ್ನು ಅವರು ಕಾಡಿನಿಂದ ನಾಡಿಗೆ ತಂದರು. ಅದೇವೇಳೆ, ಸಾಕೇತ್ ರಾಜನ್ ಈ ಬೆಳವಣಿಗೆಯ ಪರ ಇರದಿದ್ದರೂ ಅವನ ಜೊತೆ ಗೆಳೆತನ ವನ್ನು ಇಟ್ಟುಕೊಂಡರು. ಎಲ್ಲಿಯವರೆಗೆಂದರೆ, ಆತನ ಎನ್ ಕೌಂಟರ್ ಅನ್ನು ಪ್ರತಿಭಟಿಸಿ, ಆತನ ಅಸ್ಥಿಯನ್ನು ಹಿಡಿದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ವೈಚಾರಿಕವಾಗಿ ಒಂದೇ ಬಿಂದುವಿನಲ್ಲಿ ನಿಲ್ಲದ ವ್ಯಕ್ತಿಗಳಿಬ್ಬರು ಮನುಷ್ಯರಾಗಿ ಒಂದಾಗಬಹು ದಾದ ಸಾಧ್ಯತೆಗಳೆಡೆಗೆ ಗೌರಿ ಹೀಗೆ ಸೂಚನೆ ಕೊಟ್ಟರೇನೋ ಎಂದು ಅನಿಸುತ್ತದೆ.

ಇದರರ್ಥ ಬಸ್ಸು, ರೈಲು, ಮಸೀದಿ ಮಂದಿರಗಳಲ್ಲಿ ಬಾಂಬಿಟ್ಟು ಸ್ಫೋಟಿಸುವವರ ಜೊತೆ ವೈಚಾರಿಕ ಅಸಮ್ಮತಿಯೊಂದಿಗೆ ಮನುಷ್ಯರೆಂಬ ನೆಲೆಯಲ್ಲಿ ಒಂದಾಗಬಹುದು ಎಂದು ಅಲ್ಲ. ಗೌರಿ ಎಲ್ಲೂ ಬಾಂಬ್ ಸ್ಫೋಟ ಮತ್ತು ಹತ್ಯಾ ಕಾಂಡದ ಭಯೋತ್ಪಾದನೆಯೊಂದಿಗೆ ಈ ಮಟ್ಟದ ಸಹೃದಯತೆ ಯನ್ನು ತೋರಿಲ್ಲ. ಪಶ್ಚಿಮ ಘಟ್ಟದ ನಕ್ಸಲ್ ಚಟುವಟಿಕೆಯ ಬಗ್ಗೆ ಅವರಲ್ಲಿ ಆಳ ತಿಳುವಳಿಕೆಯಿತ್ತು. ಇವತ್ತು ಗೌರಿ ಹತ್ಯೆ ಯನ್ನು ನಕ್ಸಲ್‍ರ ತಲೆಗೆ ಕಟ್ಟುವಲ್ಲಿ ಅತ್ಯುತ್ಸಾಹ ತೋರುತ್ತಿರುವವರು ನಿಜವಾಗಿ ಗೌರಿಯನ್ನು ಓದಿಲ್ಲ ಎಂದೇ ಹೇಳಬೇಕು. ಗೌರಿಯೊಳಗೆ ನಕ್ಸಲಿಸಂ ಇತ್ತು. ಆದರೆ ಅದು ಕಾಡಿನಲ್ಲಿ ಅವಿತು ಕುಳಿತು, ಶಸ್ತ್ರ ಎತ್ತಿ ಮಾಡುವ ನಕ್ಸಲಿಸಂ ಆಗಿರಲಿಲ್ಲ. ಅವರು ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಂಬಿಕೆ ಇರಿಸಿದ್ದರು. ಸಾಕೇತ್ ರಾಜನ್ ಮತ್ತು ಆತನ ತಂಡ ಪಶ್ಚಿಮ ಘಟ್ಟದ ಕಾಡಿನಲ್ಲಿ ಬಂದೂಕು ಎತ್ತಿಕೊಂಡು ಮಾಡುತ್ತಿರುವ ಅದೇ ಉದ್ದೇಶದ ಹೋರಾಟವನ್ನು ಬಂದೂಕಿಲ್ಲದೇ ಮತ್ತು ನಾಗರಿಕರ ನಡುವೆಯೇ ಇದ್ದುಕೊಂಡು ನಾಡಿನಲ್ಲಿಯೇ ಮಾಡಬಹುದು ಎಂಬುದು ಅವರ ನಿಲುವಾಗಿತ್ತು.

ಆದ್ದರಿಂದಲೇ, ‘ಶಾಂತಿಗಾಗಿ ನಾಗರಿಕ ವೇದಿಕೆ ಹುಟ್ಟಿಕೊಂಡಿತು’ ಎಂಬುದು ನನ್ನ ನಂಬಿಕೆ. ವ್ಯಂಗ್ಯ ಏನೆಂದರೆ, ನಕ್ಸಲರನ್ನು ಕಾಡಿನಿಂದ ನಾಡಿಗೆ ತರುವ ಗೌರಿಯವರ ಪ್ರಯತ್ನವನ್ನು ಅಣಕದ ಭಾಷೆಯಲ್ಲಿ ವ್ಯಾಖ್ಯಾನಿಸಿದವರೇ ಅಥವಾ ಅವರೊಂದಿಗೆ ಸಹಮತ ಹೊಂದಿರುವವರೇ ಇವತ್ತು ಗೌರಿ ಹತ್ಯೆಗೆ ಸಂಭ್ರಮಿಸುತ್ತಿದ್ದಾರೆ ಮತ್ತು ಅಡ್ಡಗೋಡೆಯಲ್ಲಿ ದೀಪ ಇಟ್ಟ ಹಾಗೆ ಪ್ರತಿಕ್ರಿಯಿಸುತ್ತಿದ್ದಾರೆ. ಗೌರಿ ಹತ್ಯೆಗೆ ಬಲಪಂಥೀಯ ವಿಚಾರಧಾರೆ ಕಾರಣ ಎಂದು ಹೇಳುವುದನ್ನು ತನಿಖೆಗೆ ಮೊದಲೇ ತೀರ್ಪು ಎಂದು ಈ ಗುಂಪು ಖಂಡಿಸುತ್ತಲೇ ನಕ್ಸಲೀಯರು ಈ ಹತ್ಯೆ ನಡೆಸಿರಬಹುದು ಎಂದೂ ಹೇಳುತ್ತಿದೆ. ಒಂದನ್ನು ತಪ್ಪು ಅನ್ನುತ್ತಾ ಇನ್ನೊಂದು ತಪ್ಪನ್ನು ಮಾಡುವ ಈ ದ್ವಂದ್ವವನ್ನು ಏನೆಂದು ಪರಿಗಣಿಸಬೇಕು? ನಕ್ಸಲ್ ಚಟುವಟಿಕೆಯನ್ನು ದಮನಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿವೆ. ಯೋಧರು, ಪೊಲೀಸರ ಬಲಿದಾನ ಆಗುತ್ತಿದೆ. ನಕ್ಸಲ್ ಪ್ರದೇಶಗಳಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವುದಕ್ಕೂ ಅಡಚಣೆಗಳು ಉಂಟಾಗುತ್ತಿವೆ. ಗೌರಿ ಮುಖ್ಯವಾಗುವುದು ಇಲ್ಲೇ.  ಪಶ್ಚಿಮ ಘಟ್ಟದಲ್ಲಿ ಇವತ್ತು ನಕ್ಸಲ್ ಚಟುವಟಿಕೆ ತೀರಾ ತೀರಾ ಕುಗ್ಗಿರು ವುದರಲ್ಲಿ ಗೌರಿಯ ಪಾತ್ರ ಬಹಳ ದೊಡ್ಡದು. ಶ್ರೀ ಶ್ರೀ ರವಿಶಂಕರ್ ಅವರು ಕೊಲಂಬಿಯದ ಭಯೋತ್ಪಾದಕ ಗುಂಪಿನ ಜೊತೆ (FARC) ಮಾತುಕತೆ ನಡೆಸುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವವರೇ ಗೌರಿಯ ಮಾತುಕತೆಯನ್ನು ಅಣಕಿಸುವುದರಲ್ಲಿ ಏನು ತರ್ಕ ಇದೆ?

ಬಲಪಂಥೀಯ, ನಡುಪಂಥೀಯ ಮತ್ತು ಎಡಪಂಥೀಯ ಎಂದು ನಮ್ಮ ನಡುವೆ ಇರುವ ವಿಚಾರಧಾರೆಯನ್ನು ಬೇರ್ಪಡಿಸಿ ನೋಡಿದರೆ ಗೌರಿ ಎಡಪಂಥೀಯ ಬಿಂದುವಿನಲ್ಲಿ ನಿಲ್ಲುತ್ತಾರೆ ಅನ್ನುವುದು ನಿಜ. ಹಾಗಂತ, ಎಡಪಂಥವನ್ನೇ ಅವರು ಶಾಶ್ವತ ಠಿಕಾಣಿಯನ್ನಾಗಿ ಮಾಡಿಕೊಂಡೂ ಇರಲಿಲ್ಲ. ಸಂದರ್ಭ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ ಅವರು ಈ ಬೇಲಿಯನ್ನು ಜಿಗಿದದ್ದೂ ಇದೆ. ಅಪ್ಪ ಲಂಕೇಶ್‍ರ ‘ಸದಾ ವಿರೋಧ ಪಕ್ಷ’ ಎಂಬ ನೀತಿಯನ್ನು ಅವರು ಅಪ್ಪಿಕೊಂಡೂ ಇರಲಿಲ್ಲ. ಇದಕ್ಕೆ ಕಾರಣಗಳು ಹಲವು ಇರಬಹುದು. ಲಂಕೇಶ್‍ರ ಕಾಲಘಟ್ಟ ಮತ್ತು ಗೌರಿಯವರ ಕಾಲಘಟ್ಟವೂ ಇದಕ್ಕೆ ಒಂದು ಕಾರಣ ಆಗಿರಬಹುದು. ಬಲಪಂಥೀಯ ವಿಚಾರಧಾರೆಯು ಪ್ರಾಬಲ್ಯ ಪಡೆದಿರುವುದೂ ಇದಕ್ಕೆ ಕಾರಣವಾಗಿರಬಹುದು. ಅಷ್ಟಕ್ಕೂ, ಯಾರೇ ಆಗಲಿ ನಿರ್ದಿಷ್ಟ ವಿಚಾರಧಾರೆಯನ್ನು ಹೊಂದುವುದು ತಪ್ಪೇ? ಎಡಪಂಥ ಅಥವಾ ಬಲಪಂಥ ಅಥವಾ ನಡುಪಂಥ ಇವುಗಳಲ್ಲಿ ಯಾವುದಾದರೂ ಒಂದು ಮಾತ್ರವೇ ಇರಬೇಕು ಎಂಬ ವಾದ ಈ ದೇಶವನ್ನು ಎಲ್ಲಿಗೆ ಕೊಂಡೊಯ್ಯಬಹುದು? ಜರ್ಮನಿ, ರಷ್ಯಾ, ಇಟಲಿಗಳೆಲ್ಲ ಏನಾದುವು? ಏಕಪಂಥವನ್ನು ಒಪ್ಪಿಕೊಂಡ ಮತ್ತು ಅನೇಕ ಪಂಥಗಳನ್ನು ಸಹಿಸದ ಆಡಳಿತ ವ್ಯವಸ್ಥೆಗಳೆಲ್ಲ ಹೇಗೆ ನಾಮಾವಶೇಷವಾದುವು ಅನ್ನುವುದನ್ನು ಇತಿಹಾಸ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿರುವುದರ ಹೊರತಾಗಿಯೂ ಗೌರಿಯನ್ನು ಅದೇ ತೀವ್ರವಾದ ಬಲಿ ಪಡೆಯಿತೇ? ಎಡಪಂಥ ಮತ್ತು ಬಲಪಂಥ ಪರಸ್ಪರ ಸಂವಾದಿಸಲಾರದಂಥ ಸ್ಥಿತಿಗೆ ತಲುಪಿರುವುದೇಕೆ? ಎಡಪಂಥವನ್ನು ಒಂದು ವಿಚಾರಧಾರೆಯಾಗಿ ಒಪ್ಪಿಕೊಳ್ಳುವಾಗ ಬಲಪಂಥವನ್ನೂ ಹಾಗೆ ಒಪ್ಪಿಕೊಳ್ಳಬೇಕು.

ಯಾವಾಗ ಒಂದು ಪಂಥವು ಇನ್ನೊಂದು ಪಂಥವನ್ನು ಮುಖಾ ಮುಖಿಯಾಗುವುದಕ್ಕೆ ನಿರಾಕರಿಸುತ್ತದೋ ಆಗ ಪಂಥವು ವರ್ಗವಾಗಿ ಮತ್ತು ಭಿನ್ನಾಭಿಪ್ರಾಯವು ಧರ್ಮವಾಗಿ ಮಾರ್ಪಡುವುದಕ್ಕೆ ದಾರಿ ತೆರೆದುಕೊಳ್ಳುತ್ತದೆ. ಬಲಪಂಥದಲ್ಲೂ ಎಡಪಂಥದಲ್ಲೂ ಮತ್ತು ನಡುಪಂಥದಲ್ಲೂ ಇರುವವರೆಲ್ಲ ಮನುಷ್ಯರೇ. ಪಂಥಗಳು ಹುಟ್ಟಿಕೊಂಡಿರುವುದು ವಿಚಾರಗಳ ಕಾರಣಗಳಿಂದಲೇ ಹೊರತು ಮನುಷ್ಯರಾಗಿರುವ ಕಾರಣದಿಂದಲ್ಲ. ಎಡಪಂಥದಲ್ಲಿ ಹಿಂದೂಗಳಿರುವಂತೆಯೇ ಬಲಪಂಥದಲ್ಲೂ ಹಿಂದೂಗಳೇ ಇದ್ದಾರೆ. ಕ್ರೈಸ್ತರು, ಮುಸ್ಲಿಮರೂ ಇವುಗಳಲ್ಲಿ ಹಂಚಿ ಹೋಗಿದ್ದಾರೆ. ನಡುಪಂಥದಲ್ಲೂ ಹಿಂದೂ-ಮುಸ್ಲಿಮ್ ಮತ್ತು ಧರ್ಮದೊಂದಿಗೆ ಗುರುತಿಸಿಕೊಳ್ಳದವರಿದ್ದಾರೆ. ಬಲಪಂಥ ಎಂಬುದು ಹಿಂದೂಗಳಿಗೆ ಮೀಸಲಾಗಿಲ್ಲ. ಎಡಪಂಥ ಅನ್ನುವುದೂ ನಾಸ್ತಿಕರಿಗೆ ಮೀಸಲಾಗಿಯೂ ಇಲ್ಲ.

ಒಂದು ಪಂಥಕ್ಕೆ ಓರ್ವರು ಆಕರ್ಷಿತರಾಗುವುದಕ್ಕೆ ಓದು, ಹಿನ್ನೆಲೆ, ಸನ್ನಿವೇಶ, ಸಂದರ್ಭಗಳು ಕಾರಣವೇ ಹೊರತು ಇನ್ನಾವುದೂ ಅಲ್ಲ. ಹೀಗಿರುತ್ತಾ, ಪಂಥಗಳ ನಡುವಿನ ಭಿನ್ನಾಭಿಪ್ರಾಯವು ಹತ್ಯೆಯ ವರೆಗೆ ತಲುಪುವುದೇಕೆ? ಗೌರಿಯವರನ್ನು ಅಂತ್ಯಸಂಸ್ಕಾರಗೊಳಿಸಿರುವುದು ವೀರಶೈವ ಸಂಪ್ರದಾಯದಂತೆ. ಗೌರಿಗೂ ಒಂದು ಧರ್ಮ ಇತ್ತು. ಆ ಧರ್ಮವನ್ನು ಅವರು ಹೇಗೆ ಪರಿಭಾವಿಸಿದ್ದರೋ ಹಾಗೇ ಅದನ್ನು ಪಾಲಿಸಿದರು. ಕೊಂದವನ ಧರ್ಮ ಯಾವುದು ಎಂಬುದು ಈವರೆಗೆ ಗೊತ್ತಿಲ್ಲ. ಆತನಿಗೂ ಒಂದು ಧರ್ಮ ಇದ್ದೀತು. ಅದು ಗೌರಿಯದ್ದೇ  ಧರ್ಮ ಆಗಿರಲೂ ಬಹುದು. ವೈಚಾರಿಕ ಭಿನ್ನಾಭಿಪ್ರಾಯದ ಹೊರಗೆ ಮನುಷ್ಯರಾಗಿ ನಾವು ಒಂದುಗೂಡುವ ಬಿಂದು ಇದು. ಎಡಪಂಥದ ಬಂದೂಕಿಗೆ ಬಲಿಯಾಗುವುದೂ ಮನುಷ್ಯರೇ. ಬಲಪಂಥದ ಬಂದೂಕಿಗೆ ಬಲಿಯಾಗುವುದೂ ಮನುಷ್ಯರೇ. ಮನುಷ್ಯರನ್ನು ಸಾಯಿಸಿ ಒಂದು ಪಂಥವನ್ನು ಬೆಳೆಸಬಹುದು ಎಂದು ಆ ಹಂತಕನಿಗೆ ಯಾರು ಹೇಳಿಕೊಟ್ಟರೋ?

ಯಾವುದೇ ಪಂಥವು ಸಮಾಜ ಮತ್ತು ದೇಶದ ಹಿತಕ್ಕೆ ಪೂರಕವೋ ಮಾರಕವೋ ಎಂಬುದು ಗೊತ್ತಾಗುವುದು ಪಂಥಗಳ ನಡುವೆ ಸಂವಾದ ಏರ್ಪಡಬಹುದಾದ ವಾತಾವರಣ ನಿರ್ಮಾಣವಾದಾಗ. ಒಂದು ಪಂಥ ಅಂಥ ಸಂವಾದವನ್ನೇ ಇಷ್ಟಪಡುವುದಿಲ್ಲ ಎಂದಾದರೆ, ಆ ಪಂಥ ದುರ್ಬಲವಾಗಿದೆ ಎಂದರ್ಥ. ಸಂವಾದಕ್ಕೆ ತೆರೆದುಕೊಳ್ಳುವುದೆಂದರೆ, ಪ್ರಶ್ನೆಗಳಿಗೆ ತೆರೆದುಕೊಳ್ಳುವುದು. ಸವಾಲುಗಳನ್ನು ಸ್ವೀಕರಿಸುವುದು. ಈ ಸ್ಥಿತಿಗೆ ಪಂಥಗಳು ತೆರೆದುಕೊಂಡಾಗ ಭಯ ಹೊರಟು ಹೋಗು ತ್ತದೆ. ನಾಗರಿಕ ಸಮಾಜವು ಇನ್ನಷ್ಟು ಪ್ರಬುದ್ಧವಾಗಿ ಬೆಳೆಯುವುದಕ್ಕೆ ಅವಕಾಶ ನಿರ್ಮಾಣವಾಗುತ್ತದೆ. ಸದ್ಯದ ಬೆಳವಣಿಗೆಗಳನ್ನು ನೋಡುವಾಗ, ಇಂಥದ್ದೊಂದು  ವಾತಾವರಣಕ್ಕೆ ತೆರೆದುಕೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿವೆಯೇನೋ ಎಂದನಿಸುತ್ತಿದೆ. ಓರ್ವರ ವಿಚಾರಧಾರೆಯನ್ನು ಪ್ರತಿ ವಿಚಾರಧಾರೆಯೊಂದಿಗೆ ಎದುರಿಸುವ ಮತ್ತು ಗಟ್ಟಿ ಆಧಾರಗಳೊಂದಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ದಾರಿಯು ಮುಚ್ಚಿ ಹೋಗುತ್ತಿರುವಂತೆ ಕಾಣಿಸುತ್ತಿದೆ.

‘ತನ್ನ ವಿಚಾರಧಾರೆಗೆ ಅನ್ಯವಾದುದೆಲ್ಲವೂ ಹತ್ಯೆಗೆ ಅರ್ಹವಾದುದು’ ಎಂಬ ತೀವ್ರವಾದವನ್ನು ಪಂಥಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಬೆಳೆಸುತ್ತಿವೆಯೇನೋ ಎಂದು ಭಯವಾಗುತ್ತಿದೆ. ಸದ್ಯ ನಮ್ಮ ನಡುವಿನ ತುರ್ತು ಅಗತ್ಯ ಏನೆಂದರೆ, ಪಂಥಗಳು ಹತ್ಯೆಗೆ ಸ್ಕೆಚ್ ಹಾಕುವ ಸುಪಾರಿ ಗುಂಪುಗಳಾಗಿ ಬದಲಾಗುವುದನ್ನು ತಡೆಯುವುದು. ವೈಚಾರಿಕ ಭಿನ್ನಾಭಿಪ್ರಾಯವನ್ನು ವೈಚಾರಿಕ ಭಿನ್ನಾಭಿಪ್ರಾಯವಾಗಿಯೇ ಪರಿಗಣಿಸುವಂತಹ ವಾತಾವರಣವನ್ನು ನಿರ್ಮಿಸುವುದು. ಎಡಪಂಥ, ಬಲಪಂಥ ಮತ್ತು ನಡುಪಂಥಗಳು ಪರಸ್ಪರ ಮುಖಾಮುಖಿಯಾಗಬಹುದಾದ ಮತ್ತು ಮಾತಿನ ಅಬ್ಬರವಿಲ್ಲದೇ ಮಾತುಕತೆ ನಡೆಸಬಹುದಾದ ಸನ್ನಿವೇಶವನ್ನು ಉಂಟು ಮಾಡುವುದು. ಮಾತ್ರವಲ್ಲ, ಹತ್ಯೆಗೆ ಪ್ರೇರೇಪಿಸುವ ವಾದವನ್ನು ನಿಷ್ಕ್ರಿಯಗೊಳಿಸುವುದು.

ಗೌರಿಯನ್ನು ಕೊಂದವರು ಯಾರು ಮತ್ತು ಅವರ ವಾದವೇನು ಎಂಬುದು ಸ್ಪಷ್ಟವಾಗಿಲ್ಲದ ಈ ಹೊತ್ತಿನಲ್ಲಿ ಇನ್ನೇನೂ ಹೊಳೆಯುತ್ತಿಲ್ಲ.

 

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಆ ಮಗುವನ್ನು ಎದುರಿಟ್ಟುಕೊಂಡು…

ಮುಂದಿನ ಸುದ್ದಿ »

ರಾಜಕಾರಣಿಗಳು ಬಯಸುವ ಭಾರತ-ಪಾಕಿಸ್ತಾನ…

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×